ಕಲಬುರಗಿ | ರಾಜ್ಯದಲ್ಲಿ ನವಪಕ್ಷ ಸ್ಥಾಪನೆ : ನಟ ಚೇತನ್ ಘೋಷಣೆ

Update: 2024-12-19 11:36 GMT

ಕಲಬುರಗಿ : ದೇಶ ಮತ್ತು ರಾಜ್ಯಗಳಲ್ಲಿ ಹೆಚ್ಚುತ್ತಿರುವ ಅಸಮಾನತೆ ವಿರುದ್ಧ ಸಮಾನತೆ ಹಾಗೂ ಸಾಮಾಜಿಕ ನ್ಯಾಯ ಸಾಧನೆಗಾಗಿ ನವಪಕ್ಷ ಸ್ಥಾಪನೆಗೆ ಸಿದ್ಧತೆ ಹೊತ್ತಿರುವ ನಟ ಮತ್ತು ಸಾಮಾಜಿಕ ಕಾರ್ಯಕರ್ತ ಚೇತನ್ ಅವರು ತಮ್ಮ ಮುಂದಿನ ಗುರಿಗಳ ಕುರಿತು ದೃಢ ಪ್ರತಿಜ್ಞೆಯನ್ನು ಆಳಂದದಲ್ಲಿ ಪ್ರಕಟಿಸಿದರು.

ಆಳಂದ ಪಟ್ಟಣದ ಉಮರಗಾ ಹೆದ್ದಾರಿಯ ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ಸಾಮಾಜಿಕ ಚಿಂತಕರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, "ನಾವು ಸಾಮಾಜಿಕ ನ್ಯಾಯ ಹಾಗೂ ಸಮಾನತೆಯನ್ನು ಸ್ಥಾಪಿಸಲು ಎದುರಿಸುತ್ತಿರುವ ಅನ್ಯಾಯದ ವಿರುದ್ಧ ನಾವೆಲ್ಲರೂ ಹೋರಾಡಬೇಕಾಗಿದೆ" ಇದಕ್ಕಾಗಿ ಹೊಸಪಕ್ಷವನ್ನು ಕಟ್ಟಿ ಈ ಮೂಲಕ ಸಂವಿಧಾನದಡಿ ಯೋಜನೆಗಳನ್ನು ರೂಪಿಸಿ ನ್ಯಾಯ ಒದಗಿಸುವ ಕುರಿತಾದ ಪ್ರಯತ್ನಕ್ಕಾಗಿ ಹೊಸ ಪಕ್ಷವನ್ನು ಕಟ್ಟುವ ಕುರಿತು ಅಭಿಪ್ರಾಯ ಸಂಗ್ರಹ ಆರಂಭಿಸಲಾಗಿದೆ ಎಂದು ಅವರು ಹೇಳಿದರು.

ಸಂವಿಧಾನದ ಆದರ್ಶಗಳನ್ನು ವಿವರಿಸುವಾಗ, ಬ್ರಾಹ್ಮಣ್ಯ ವ್ಯವಸ್ಥೆ, ಬಂಡವಾಳ ಶಾಹಿ ವ್ಯವಸ್ಥೆ ಹಾಗೂ ಆರ್ಥಿಕ ಅಸಮಾನತೆಗಳನ್ನು ಕಡಿವಾಣ ಹಾಕಿ, ಸಮಾಜದ ಎಲ್ಲಾ ವರ್ಗಗಳಿಗೆ ಸಮಾನ ಹಕ್ಕುಗಳನ್ನು ದೊರೆಯುವಂತೆ ಮಾಡಬೇಕಾಗಿದೆ ಎಂದು ಹೇಳಿದರು.

ಮಹಿಳಾ ಸಮಾನತೆ, ಶಿಕ್ಷಣ ಮತ್ತು ಆರೋಗ್ಯ ಸುಧಾರಣೆ, ಸುಧಾರಿತ ಆಡಳಿತ ವ್ಯವಸ್ಥೆ ಹಾಗೂ ಉದ್ಯೋಗ ಸೃಷ್ಟಿಗೆ ಹೆಚ್ಚಿನ ಗಮನ ನೀಡಲು ಆಗ್ರಹಿಸಿದರು.

ಪ್ರಾದೇಶಿಕ ಶಕ್ತಿಯ ಸದ್ಬಳಕೆ, ಸಾಮಾಜಿಕ ನ್ಯಾಯ, ಮಹಿಳಾ ಸಮಾನತೆ, ಮತ್ತು ಆರ್ಥಿಕ ಅಸಮಾನತೆ ವಿರುದ್ಧ ಹೋರಾಟ ನಮ್ಮ ಗುರಿಯಾಗಿದೆ. ನಾವು ಈ ಎಲ್ಲಾ ವಿಚಾರಗಳನ್ನು ನಿಷ್ಠೆಯಿಂದ ಅನುಷ್ಠಾನಕ್ಕೆ ತರಲು ಕಾರ್ಯನಿರ್ವಹಿಸೋಣ" ಎಂದರು.

ಬಂಡವಾಳ ಶಾಹಿ ವ್ಯವಸ್ಥೆಯಿಂದಾಗಿ ಆರ್ಥಿಕ ಅಸಮಾನತೆ ಹೆಚ್ಚಿದಾಗ, ಅದನ್ನು ಕಡಿವಾಣ ಹಾಕಲು ಯೋಜನೆ ರೂಪಿಸುವುದಕ್ಕೆ ಸಂಬಂಧಿಸಿದಂತೆ, "ಉದ್ಯೋಗ ಸೃಷ್ಟಿಗೆ ಹೆಚ್ಚು ಗಮನ ನೀಡಬೇಕು, ಹಾಗೂ ಜನರ ಆಸ್ತಿಯನ್ನು ಶ್ರೀಮಂತರ ಕೈಗೆ ಹೋಗದಂತೆ ಯೋಜನೆ ರೂಪಿಸಬೇಕಾಗಿದೆ" ಎಂದರು.

ಹೆಚ್ಚು ಪ್ರಮಾಣದಲ್ಲಿ ಪ್ರಾದೇಶಿಕ ಅಭಿವೃದ್ಧಿ, ಪರಿಸರ ಸ್ನೇಹಿ ನೀರಿನ ಬಳಕೆ, ಮತ್ತು ಜಾನಪದ ಸಾಂಸ್ಕೃತಿಕ ಪರಂಪರೆಯ ಹಕ್ಕುಗಳಿಗೆ ಪ್ರತಿಬದ್ಧತೆ ವ್ಯಕ್ತಪಡಿಸಿದ ಚೇತನ್ ಅವರು, ತಮ್ಮ ಮುಂದಿನ ಪ್ರಾಣಾಳಿಕೆಯನ್ನು ಸಂಘಟನೆಯ ರಚನೆಗೆ ಮೀಸಲಿಡಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಹೋರಾಟಗಾರ ಮೌಲಾ ಮುಲ್ಲಾ, ಪ್ರಕಾಶ ಮೂಲಭಾರತಿ, ವಿಶ್ವನಾಥ ಕೋರಣೇಶ್ವರ ಸ್ವಾಮೀಜಿ, ಮಹಾದೇವ ಕಾಂಬಳೆ, ಆಶ್ಫಾಕ್ ಮುಲ್ಲಾ ಮತ್ತಿತರು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News