ಕಲಬುರಗಿ | ಅಂದಾನಿ ಹೆಸರಿನಲ್ಲಿ ಆರ್ಟ್ ಗ್ಯಾಲರಿ ಮಾಡಿ ಗುರು ಕಾಣಿಕೆ ಸಲ್ಲಿಸಿ : ಪ.ಸ.ಕುಮಾರ್
ಕಲಬುರಗಿ : ವಿ.ಜಿ.ಅಂದಾನಿ ಅವರು ನಾಡಿನ ಹೆಸರಾಂತ ಕಲಾವಿದರಾಗಿದ್ದು, ಸಾವಿರಾರು ಕಲಾವಿದರಿಗೆ ಮಾರ್ಗದರ್ಶನ ನೀಡಿ ಬದುಕಿಗೆ ಆಸರೆಯಾಗಿದ್ದು, ಶಿಷ್ಯ ಬಳಗ ಅಂದಾನಿ ಹೆಸರಿನಲ್ಲೊಂದು ಆರ್ಟ್ ಗ್ಯಾಲರಿ ಮಾಡಿ ಅವರಿಗೆ ಗುರು ಕಾಣಿಕೆಯಾಗಿ ನೀಡಬೇಕು ಎಂದು ಕರ್ನಾಟಕ ಲಲಿತಕಲಾ ಅಕ್ಯಾಡೆಮಿ ಅಧ್ಯಕ್ಷ ಪ.ಸ.ಕುಮಾರ್ ಅವರು ಸಲಹೆ ನೀಡಿದ್ಧಾರೆ.
ನಗರದ ಮಾತೋಶ್ರೀ ನೀಲಗಂಗಮ್ಮ ಅಂದಾನಿ ಆರ್ಟ್ ಗ್ಯಾಲರಿಯಲ್ಲಿ ಬುಧವಾರ ದಿ ಐಡಿಯಲ್ ಫೈನ್ ಆರ್ಟ್ ಸೊಸೈಟಿಯಿಂದ ಆಯೋಜಿದ 2024ನೇ ಸಾಲಿನ ದೃಶ್ಯಭೂಷಣ ಹಾಗೂ ದಿ.ಕಲಾವಿದ ಎಂ.ಬಿ.ಪಾಟೀಲ್ ಸ್ಮರಣಾರ್ಥ 'ದೃಶ್ಯಭೂಷಣ' ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಶಿಷ್ಯ ಬಳಗ ಸ್ಥಾಪಿಸಿದ ಗ್ಯಾಲರಿಯಲ್ಲಿ ವಿಜಿ ಅಂದಾನಿ ಅವರು ಬದುಕಿನ ಉದ್ದಕ್ಕೂ ರಚಿಸಿದ ಕಲಾಕೃತಿಗಳು ಮತ್ತು ಆಧುನಿಕ ಕಲಾ ವಿಸ್ಮಯಗಳನ್ನು ಪ್ರದರ್ಶಿಸಬೇಕು ಎಂದರು.
ಹಿರಿಯ ಸಾಹಿತಿ ಡಾ.ರಂಜಾನ್ ದರ್ಗಾ ಅವರು ಮಾತನಾಡಿ, ಕಲೆಗೆ ಸಾಕಷ್ಟು ಬೇಡಿಕೆ ಇದೆ. ಅನೇಕ ಕಲಾವಿದರು ಉಪ ಜೀವನ ನಡೆಸುತ್ತಿದ್ದಾರೆ. ಕಲಾವಿದರಕ್ಕಿಂತ ಕಲಾಕೃತಿ ಜೀವಂತವಾಗಿ ಉಳಿಯುತ್ತದೆ. ಕಲೆ ಎಲ್ಲರಿಗೂ ಒಲಿಯುವುದಿಲ್ಲ. ಹೀಗಾಗಿ ಕಲಾವಿದರನ್ನು ಗುರುತಿಸಿ ಪ್ರೊತ್ಸಾಹಿಸುವ ಅಗತ್ಯತೆ ಇದೆ. ಕಲಾವಿದರಿಂದ ಮಾತ್ರ ಹೊಸತನ ಸೃಷ್ಟಿ ಸಾಧ್ಯ ಎಂದರು.
ಕಲಾವಿದರಾದ ಬಿ.ನೀಲಮ್ಮ, ಬಸವರಾಜ್ ಜಾನೆ, ಡಾ.ಶಿವಾನಂದ್ ಬಂಟನೂರ್, ಡಾ.ಪರಶುರಾಮ್, ಡಾ.ಕಾಶಿನಾಥ್, ವಿ.ಬಿ.ಬಿರಾದಾರ್, ಡಾ.ರಹೆಮಾನ್ ಪಟೇಲ್, ಮಂಜುಳಾ ಜಾನೆ, ಶೇಶರಾವ್ ಬಿರಾದಾರ್, ಗೌರೀಶ್ ಅಂದಾನಿ, ಶಶಿಕಾಂತ್ ಮಾಶಾಳಕರ್ ಮುಂತಾದವರು ಉಪಸ್ಥಿತರಿದ್ದರು.
ದೃಶ್ಯಭೂಷಣ ಪ್ರಶಸ್ತಿ ಪ್ರದಾನ :
2024ನೇ ಸಾಲಿನ ದೃಶ್ಯಭೂಷಣ (ಮರಣೋತ್ತರ) ಪ್ರಶಸ್ತಿಯನ್ನು ದಿ.ಮಲ್ಲಿಕಾರ್ಜುನ್ ಶೆಟ್ಟಿ ಅವರ ಪರವಾಗಿ ಪತ್ನಿ ಗೀತಾ ಶೆಟ್ಟಿ ಅವರಿಗೆ ನೀಡಿ ಗೌರವಿಸಲಾಯಿತು ಹಾಗೂ ದಿ.ಕಲಾವಿದ ಎಂ.ಬಿ.ಪಾಟೀಲ್ ಸ್ಮರಣಾರ್ಥ ದೃಶ್ಯಭೂಷಣ ಪ್ರಶಸ್ತಿಯನ್ನು ಎಂ.ಜಿ.ದೊಡ್ಡಮನಿ ಅವರಿಗೆ ನೀಡಿ ಗೌರವಿಸಲಾಯಿತು.