ಕಲಬುರಗಿ | ಅಮಿತ್ ಶಾ ವಿರುದ್ಧ ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಪ್ರತಿಭಟನೆ

Update: 2024-12-19 17:11 GMT

ಕಲಬುರಗಿ : ಭಾರತ ಸರ್ಕಾರದ ಕೇಂದ್ರ ಸಚಿವ ಅಮಿತ್ ಶಾ ಅವರು ಸಂಸತ್ತಿನಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಕುರಿತು ಅವಹೇಳನಕಾರಿ ಹೇಳಿಕೆಯನ್ನು ಗುಲ್ಬರ್ಗಾ ವಿಶ್ವವಿದ್ಯಾಲಯದ ಎಸ್‌ಸಿ /ಎಸ್‌ಟಿ ನೌಕರರ ಸಂಘದ ಪದಾಧಿಕಾರಿಗಳು ತೀವ್ರವಾಗಿ ಖಂಡಿಸಿ ಗುರುವಾರ ವಿಶ್ವವಿದ್ಯಾಲಯದ ಕಾರ್ಯಸೌಧದ ಮುಂದೆ ಪ್ರತಿಭಟನೆ ನಡೆಸಿದರು.

ಕೇಂದ್ರ ಗೃಹ ಸಚಿವರ ಹೇಳಿಕೆ ವಿರುದ್ಧ ಘೋಷಣೆ ಕೂಗುವ ಮೂಲಕ ಗೃಹ ಸಚಿವರು ದೇಶದ ಜನರ ಮುಂದೆ ಕ್ಷಮೆಯಾಚಿಸಿ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕೆಂದು ಪ್ರತಿಭಟನೆಕಾರರು ಒತ್ತಾಯಿಸಿದರು.

ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ಚಂದ್ರಕಾಂತ್ ಯಾತನೂರು ಅವರು ಮಾತನಾಡಿ, ಕೇಂದ್ರ ಗೃಹ ಸಚಿವರು ತಮ್ಮ ಅಸಂವಿಧಾನಿಕ ಹೇಳಿಕೆಯನ್ನು ಹಿಂಪಡೆದು ದೇಶದ ಜನರ ಮುಂದೆ ಬೇಶರತ್ತಾಗಿ ಬಹಿರಂಗವಾಗಿ ಕ್ಷಮೆಯಾಚಿಸಬೇಕು. ದೇಶದ ಪ್ರಜ್ಞಾವಂತರಾದ ನಮಗೆ ತುಂಬಲಾರದ ನೋವಾಗಿದೆ. ಭವ್ಯ ಭಾರತದ ನೊಂದಿರುವ ವಿವಿಧ ಸಮುದಾಯಗಳನ್ನು ಅವಮಾನಿಸಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನವನ್ನು ಸ್ಮರಿಸಿ ಅಧಿಕಾರ ಅನುಭವಿಸುತ್ತಿರುವ ಪ್ರಜ್ಞಾವಂತ ಸಚಿವರೊಬ್ಬರು ಈ ರೀತಿಯ ಹೇಳಿಕೆ ನೀಡಿರುವುದು ದುರಾದೃಷ್ಟಕರ ಎಂದು ಖಂಡಿಸಿದರು.

ವಿಶ್ವವಿದ್ಯಾಲಯದ ಸ್ನಾತಕೋತ್ತರ ಅತಿಥಿ ಉಪನ್ಯಾಸಕರ ಸಂಘ, ಸಂಶೋಧನಾ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿ ಸಂಘಗಳ ಜೊತೆಗೆ ವಿದ್ಯಾರ್ಥಿಗಳು ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ಹಿಡಿದು ಗ್ರಂಥಾಲಯದಿಂದ ವಿಶ್ವವಿದ್ಯಾಲಯದ ಕಾರ್ಯಸೌಧದವರೆಗೆ ಮೆರವಣಿಗೆ ನಡೆಸುವ ಮೂಲಕ ಕೇಂದ್ರ ಸಚಿವ ಅಮಿತ್ ಶಾ ಅವರು ಕ್ಷಮೆಯಾಚಿಸುವಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕನ್ನಡ ಅದ್ಯಯನ ಸಂಸ್ಥೆ ನಿರ್ದೇಶಕ ಹಾಗೂ ಸಾಹಿತಿ ಪ್ರೊ.ಎಚ್.ಟಿ.ಪೋತೆ, ಸಂಘದ ಅಧ್ಯಕ್ಷ ಪ್ರೊ. ಜಿ.ಎಂ.ವಿದ್ಯಾಸಾಗರ್, ಸಮಾಜ ವಿಜ್ಞಾನ ನಿಕಾಯದ ಡೀನ್ ಪ್ರೊ.ಶ್ರೀರಾಮುಲು, ಪ್ರೊ.ದಶರಥ್ ನಾಯಕ, ಪ್ರೊ.ಎಸ್.ಎನ್.ಗಾಯಕವಾಡ್, ಪ್ರೊ.ಆನಂದ್ ನಾಯಕ್, ಪ್ರೊ.ಆನಂದ್ ಸಾವದಾನೆ, ಎಸ್ಸಿ/ಎಸ್ಟಿ ನೌಕರರ ಸಂಘದ ಕಾರ್ಯದರ್ಶಿ ಬಸವರಾಜ್ ಕಪೂರ್, ಬೋಧಕೇತರ ಸಿಬ್ಬಂದಿ ಪ್ರಕಾಶ್ ಹದನೂರು, ಹಾಗೂ ಗುಲ್ಬರ್ಗಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಅತಿಥಿ ಉಪನ್ಯಾಸಕರ ಸಂಘ, ಸಂಶೋಧನಾ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ಸಂಘಗಳ ಕಾರ್ಯಕರ್ತರು ಪಾಲ್ಗೊಂಡಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News