ಕಲಬುರಗಿ: ಅಂಬೇಡ್ಕರ್ ಪುತ್ಥಳಿಗೆ ಅವಮಾನ; ದಲಿತ ಸಂಘಟನೆಗಳಿಂದ ಪ್ರತಿಭಟನೆ

Update: 2024-01-23 15:09 GMT

ಕಲಬುರಗಿ: ಸಂವಿಧಾನ ಶಿಲ್ಪಿ ಡಾ. ಬಿ. ಆರ್ ಅಂಬೇಡ್ಕರ್ ಅವರ ಪತ್ಥಳಿಗೆ ಕಿಡಿಗೇಡಿಗಳು ಚಪ್ಪಲಿ ಹಾರ ಹಾಕಿ ಅಪಮಾನ ಮಾಡಿರುವ ಘಟನೆ ನಗರದ ಹೊರವಲಯದಲ್ಲಿರುವ ಕೋಟನೂರ್ (ಡಿ) ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.

 ಮಂಗಳವಾರ ಬೆಳಿಗ್ಗೆಯಿಂದ ದಲಿತ ಸಂಘಟನೆಗಳು ರಾಮ ಮಂದಿರ, ಫರತಹಬಾದ್, ಜೇವರ್ಗಿ ತಾಲ್ಲೂಕು, ತೀಮ್ಮಾಪುರಿ ಸರ್ಕಲ್  ಸೇರಿದಂತೆ ಹಲವೆಡೆ ಪ್ರತಿಭಟನೆಗಳನ್ನು ನಡೆಸಿದ್ದು, ಸಂಚಾರ ಮತ್ತು ಮಳಿಗೆಗಳುನ್ನು ಬಂದ್ ಮಾಡಿಸಿ ಟೈರ್ ಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು ಆರೋಪಿಗಳ  ಬಂಧನಕ್ಕೆ ಆಗ್ರಹಿಸಿದ್ದಾರೆ.

ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಹಾಗೂ ಪೊಲೀಸ್ ಆಯುಕ್ತರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪೊಲೀಸರು ಸಂಪೂರ್ಣ ತನಿಖೆ ನಡೆಸಿ, ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಕಾನೂನು ಪ್ರಕಾರ ಶಿಕ್ಷೆಗೊಳಪಡಿಸಬೇಕು. ಅಂಬೇಡ್ಕರ್ ಪುತ್ಥಳಿಗೆ ಮಾಡುವ ಅಪಮಾನ ಇಡೀ ನಾಗರಿಕ ಸಮಾಜಕ್ಕೆ ಮಾಡುವ ಅಪಮಾನವಾದಂತೆ ಇಂತಹ ಅನಾಗರಿಕ ಪ್ರವೃತ್ತಿಯನ್ನು ನಾವು ಎಲ್ಲರೂ ಸೇರಿಕೊಂಡು ಖಂಡಿಸಲೇಬೇಕು ಎಂದು ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮ ಪ್ರಭು ಪಾಟೀಲ  ಆರೋಪಿಗಳ ಪತ್ತೆಗೆ ಒತ್ತಾಯಿಸಿದ್ದಾರೆ.

 ಪ್ರತಿಭಟನೆಯ ನಂತರ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿಲಾಯಿತು. ಈ ಸಂದರ್ಭದಲ್ಲಿ ರಾಜಪ್ಪ ಹುಂಡೇಕರ್, ಶ್ರೀಕಾಂತ ಶಿಂಧೆ, ಆನಂದ ಕಲ್ಲಕ್, ನಾಗೇಂದ್ರ ಬುರ್ಲಿ, ಸಂಜು ಬುಳಕರ್, ಶಿವರಾಜ ಕಲ್ಲಕ್, ರವಿ ಹೊಸಮನಿ, ಬಸವರಾಜ ಮುಡಬೂಳ, ಗಂಗಾಧರ ಸೇರಿದಂತೆ ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಅನೇಕ ಮುಖಂಡರು ಹಾಗೂ ಪದಾಧಿಕಾರಿಗಳು ಇದ್ದರು.

ಭಾರತದ ಸಮಗ್ರ ಅಭಿವೃದ್ಧಿಗೆ, ಸರ್ವಜನತೆಯ ಸಮಾನತೆಗೆ ಸಂವಿಧಾನ ಕೊಟ್ಟ ಅಂಬೇಡ್ಕರ್ ಅವರ ಪುತ್ಥಳಿಗೆ ಅಪಮಾನ ಮಾಡುವ ಮೂಲಕ ಭಾರತದ ಸಂವಿಧಾನವನ್ನು, ಸಮಾನತೆಯನ್ನು ವಿರೋಧಿಸುವ ಮನೋಭಾವವನ್ನು ಪ್ರದರ್ಶಿಸಲಾಗಿದೆ. ಭಾರತವನ್ನು ಕೋಮುವಾದಿ ನೆಲೆಯಲ್ಲಿ ವಿಚ್ಛಿದ್ರಗೈಯುತ್ತಿರುವ ಸಂವಿಧಾನ ವಿರೋಧಿ ಮನುವಾದಿ ಮನಸುಗಳು ಇಂತಹ ದುಷ್ಕೃತ್ಯಕ್ಕಿಳಿಯುತ್ತವೆ. ಈ ದುಷ್ಕೃತ್ಯ ಎಸಗಿದವರನ್ನು ಪತ್ತೆ ಹಚ್ಚಿ ಶಿಕ್ಷೆಗೊಳಪಿಡಸಬೇಕು.

ಕೆ.ನೀಲಾ, ಸಿಪಿಎಂ ಕಲಬುರಗಿ  ಜಿಲ್ಲಾ ಕಾರ್ಯದರ್ಶಿ

ಕಲಬುರಗಿ ನಗರದಾದ್ಯಂತ ಮದ್ಯ ಮಾರಾಟ ನಿಷೇಧ

ಕಲಬುರಗಿ ನಗರದಲ್ಲಿ ಯಾವುದೆ ಅಹಿತಕರ ಘಟನೆಗಳು ನಡೆಯದಂತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜ.23ರ ಸಂಜೆ 6 ರಿಂದ ಜ.24ರ ಮದ್ಯರಾತ್ರಿ 12 ಗಂಟೆ ವರೆಗೆ ಕರ್ನಾಟಕ ಅಬಕಾರಿ ಕಾಯ್ದೆ-1965ರ ಕಲಂ 21ರಂತೆ ಕಲಬುರಗಿ ನಗರಕ್ಕೆ ಸೀಮಿತವಾಗಿ ಎಲ್ಲ ತರಹದ ಮದ್ಯ ತಯಾರಿಕಾ ಘಟಕಗಳನ್ನು, ಮದ್ಯಪಾನ, ಸಾರಾಯಿ, ಶೇಂಧಿ, ಸ್ವದೇಶಿ ಹಾಗೂ ವಿದೇಶಿ ಮದ್ಯಪಾನ ಮತ್ತು ಮಾದಕ ವಸ್ತುಗಳ ಮಾರಾಟ ಮಾಡುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಆದೇಶಿಸಿದ್ದಾರೆ. ಇದಲ್ಲದೆ ಬಾರ್ ಮತ್ತು ರೆಸ್ಟೋರೆಂಟ್ ಅಂಗಡಿಗಳನ್ನು ಮುಚ್ಚುವಂತೆ ಆದೇಶದಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News