ಕಲಬುರಗಿ | ನ.10 ರಂದು ಜಿಲ್ಲಾ ಪ್ರಥಮ ಜನಪದ ಸಾಹಿತ್ಯ ಸಮ್ಮೇಳನ
ಕಲಬುರಗಿ : ಜಿಲ್ಲಾ ಪ್ರಥಮ ಜನಪದ ಸಾಹಿತ್ಯ ಸಮ್ಮೇಳನ ನ.10ರಂದು ನಗರದ ಕನ್ನಡ ಭವನದಲ್ಲಿ ಜರುಗಲಿದೆ. ಈ ಕುರಿತು ಭರದ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಜನಪದರ ಜೀವನದಲ್ಲಿ ಹಾಸು ಹೊಕ್ಕಾಗಿರುವ ಜನಪದ ಕಲೆ ಮತ್ತು ಸಾಹಿತ್ಯ ಒಬ್ಬರಿಂದ ಒಬ್ಬರಿಗೆ ಹರಿದು ಬಂದಿವೆ. ಅವು ನಮ್ಮ ಸಾಂಸ್ಕೃತಿಕ ಜೀವನಕ್ಕೆ ಬುನಾದಿಯಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದರು.
ನಗರದ ಕನ್ನಡ ಭವನದಲ್ಲಿ ಬುಧವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಸಮ್ಮೇಳನದ ಮಾಹಿತಿ ನೀಡಿದ ತೇಗಲತಿಪ್ಪಿ, ಎಲ್ಲಾ ಸಾಹಿತ್ಯದ ಪ್ರಕಾರಗಳಿಗೆ ಜನಪದ ಸಾಹಿತ್ಯವೇ ತಾಯಿ ಬೇರಾಗಿದೆ. ಇಂದು ಜನಸಾಮಾನ್ಯರ ಜೀವನ ಮಟ್ಟ ಎತ್ತರಿಸಲು ಮತ್ತು ಸಾಂಸ್ಕೃತಿಕ ಬದುಕನ್ನು ಕಟ್ಟಿಕೊಳ್ಳಲು ಜನಪದ ಸಾಹಿತ್ಯ ತುಂಬಾ ಪರಿಣಾಮಕಾರಿಯಾಗಿದೆ. ಆಧುನಿಕ ಜೀವನ ಶೈಲಿಯಿಂದ ನಮ್ಮ ಜನಪದ ಕಲೆ ಮತ್ತು ಸಂಸ್ಕೃತಿ ಮರೀಚಿಕೆಯಾಗುತ್ತಿದೆ. ಅದನ್ನು ಉಳಿಸಿ ಬೆಳೆಸುವಲ್ಲಿ ಇಂಥಹ ಸಮ್ಮೇಳನ ಆಯೋಜಿಸಲಾಗಿದೆ. ಜಿಲ್ಲೆಯ ವಿವಿಧ ಭಾಗಗಳಿಂದ ಜನಪದ ಕಲಾವಿದರು, ಸಾಹಿತಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ನ.10ರಂದು ಬೆಳಗ್ಗೆ 9.30ಕ್ಕೆ ನಗರದ ಮಿನಿ ವಿಧಾನ ಸೌಧದಿಂದ ಕನ್ನಡ ಭವನದವರೆಗೆ ಸಮ್ಮೇಳನಾಧ್ಯಕ್ಷರ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದ್ದು, ಸಾಹಿತಿ ಎ.ಕೆ. ರಾಮೇಶ್ವರ ಚಾಲನೆ ನೀಡಲಿದ್ದಾರೆ. ಸರಕಾರಿ ಎನ್.ಪಿ.ಎಸ್. ನೌಕರರ ಸಂಘದ ಜಿಲ್ಲಾಧ್ಯಕ್ಷ ಧರ್ಮರಾಜ ಜವಳಿ ನೇತೃತ್ವ ವಹಿಸಲಿದ್ದಾರೆ. ಕಸಾಪದ ವಿವಿಧ ತಾಲೂಕಾಧ್ಯಕ್ಷರುಗಳು ಉಪಸ್ಥಿತರಿರುವರು ಎಂದು ತಿಳಿಸಿದರು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ. ಟಿ.ಎಂ. ಭಾಸ್ಕರ್ ಉದ್ಘಾಟಕರಾಗಿ ಆಗಮಿಸಲಿದ್ದು, ಹಿರಿಯ ಲೇಖಕಿ ಪ್ರೊ.ಶೋಭಾದೇವಿ ಚೆಕ್ಕಿ ಸಮ್ಮೇಳನಾಧ್ಯಕ್ಷತೆ ವಹಿಸಲಿದ್ದಾರೆ. ಕಜಾಪ ರಾಜ್ಯ ಕಾರ್ಯಾಧ್ಯಕ್ಷ ಡಾ.ಎಸ್ ಬಾಲಾಜಿ, ಬೆಂಗಳೂರಿನ ಸಿ.ಸಿ.ಬಿ. ವಿಭಾಗದ ಸಿಪಿಐ ಹಾಗೂ ಜಾನಪದ ಗಾಯಕ ಜ್ಯೋತಿರ್ಲಿಂಗ ಹೊನಕಟ್ಟಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಡಾ. ಬಿ.ಎಸ್. ಪೊಲೀಸ್ ಪಾಟೀಲ, ಡಾ.ಸ್ವಾಮಿರಾವ ಕುಲಕರ್ಣಿ, ಡಾ. ಹನುಂತರಾವ ದೊಡ್ಮನಿ, ಬಾಬುರಾವ ಜಮಾದಾರ, ಡಾ.ಶಾರದಾದೇವಿ ಜಾಧವ, ಡಾ.ಸುರೇಂದ್ರಕುಮಾರ ಕೆರಮಗಿ, ಡಾ. ಸಂಗೀತಾ ಹಿರೇಮಠ ಅವರನ್ನು ಸತ್ಕರಿಸಲಾಗುವುದು ಎಂದರು.
ನ.10 ಮಧ್ಯಾಹ್ನ 12.15 ಕ್ಕೆ ನಡೆಯುವ ಚಿಂತನಾಗೋಷ್ಠಿಯಲ್ಲಿ ಜನಪದ ಸಾಹಿತ್ಯದ ತತ್ವ-ಸತ್ವ-ಮಹತ್ವ ಎಂಬ ವಿಷಯದ ಕುರಿತು ಡಾ.ರಾಜೇಂದ್ರ ಯರನಾಳೆ, ಜಿಲ್ಲೆಯ ಜನಪದ ಸಾಹಿತ್ಯದ ವೈವಿಧ್ಯತೆ ಕುರಿತು ಡಾ. ಚಿತ್ಕಳಾ ಮಠಪತಿ, ಸಮ್ಮೇಳನಾಧ್ಯಕ್ಷರ ಬದುಕು-ಬರಹ ಕುರಿತು ಡಾ. ಸುರೇಶ ಜಾಧವ ಮಾತನಾಡಲಿದ್ದಾರೆ ಎಂದು ತಿಳಿಸಿದರು.
ನ.10ಮಧ್ಯಾಹ್ನ 2.15 ಕ್ಕೆ ನಡೆಯುವ ಹಾಡು ಹೆಜ್ಜೆಗಳ ಸಂಭ್ರಮದಲ್ಲಿ ಅನೇಕ ಕಲಾ ತಂಡಗಳು, ವಿವಿಧ ಶಾಲಾ ಮಕ್ಕಳಿಂದ ಜಾನಪದ ಸಾಂಸ್ಕೃತಿಕ ಸಂಭ್ರಮ ಜರುಗುವುದು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಸಾಪದ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ, ರಾಜೇಂದ್ರ ಮಾಡಬೂಳ, ಧರ್ಮರಾಜ ಜವಳಿ, ಎಂ ಎನ್ ಸುಗಂಧಿ, ಸ್ವಾಗತ ಸಮಿತಿಯ ಅಧ್ಯಕ್ಷ ಮಹ್ಮದ್ ಇಬ್ರಾಹಿಂ, ಗೌರವಾಧ್ಯಕ್ಷ ಕಾಶಿನಾಥ ಪಲ್ಲೇರಿ, ಕಾರ್ಯಾಧ್ಯಕ್ಷ ಬಿ.ಎನ್. ಪುಣ್ಯಶೆಟ್ಟಿ ಇತರರಿದ್ದರು.