ಕಲಬುರಗಿ | ದೇವಸ್ಥಾನಗಳಲ್ಲಿ ಕಳ್ಳತನ ಪ್ರಕರಣ : ಆರೋಪಿಯ ಬಂಧನ
ಕಲಬುರಗಿ: ಚಿತ್ತಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಎರಡು ದೇವಸ್ಥಾನಗಳ ಆಭರಣಗಳು ಮತ್ತು ಹುಂಡಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೊರ್ವನನ್ನು ಬಂಧಿಸಿ, ಆತನ ಬಳಿ ಇದ್ದ ಬಂಗಾರ, ಬೆಳ್ಳಿ ಹಾಗೂ ಆಭರಣ ಹಾಗೂ 1,80,500 ರೂ.ಹಣವನ್ನು ಜಪ್ತಿ ಮಾಡಿಕೊಳ್ಳುವಲ್ಲಿ ಚಿತ್ತಾಪುರ ಪೊಲೀಸ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಚಿತ್ತಾಪುರ ತಾಲ್ಲೂಕಿನ ಬಹಾರಪೇಠ ಗ್ರಾಮದ ನಿವಾಸಿ ಬೀರಪ್ಪ (35) ಬಂಧಿತ ಆರೋಪಿಯಾಗಿದ್ದಾನೆ.
ಬಹಾರಪೇಠ ತಾಂಡಾ ಹಾಗು ಆಲೂರ ಗ್ರಾಮದಲ್ಲಿ ನ.31ರಂದು ಮತ್ತು ಡಿ.8 ರಂದು ಕ್ರಮವಾಗಿ ಸೇವಲಾಲ ದೇವಸ್ಥಾನ, ಚೌರಮ್ಮ ಗುಡಿಯಲ್ಲಿನ ಬೆಳ್ಳಿ, ಬಂಗಾರ, ಹುಂಡಿಯಲ್ಲಿನ ಹಣವನ್ನು ಯಾರೋ ಕಳ್ಳತನವಾಗಿದೆ ಎಂದು ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು.
ಪ್ರತ್ಯೇಕ ಎರಡು ಪ್ರಕರಣಗಳು ದಾಖಲಿಸಿಕೊಂಡ ಪೊಲೀಸರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು, ಅಪರ ಪೊಲೀಸ್ ಅಧೀಕ್ಷಕ ಎನ್. ಶ್ರೀನಿಧಿ, ಶಹಾಬಾದ್ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಶಂಕರಗೌಡ ಪಾಟೀಲ್, ಸಿಪಿಐ ಚಂದ್ರಶೇಖರ ತಿಗಡಿ ಮಾರ್ಗದರ್ಶನದಲ್ಲಿ ಪಿ.ಎಸ್.ಐ ಗಳಾದ ಶ್ರೀಶೈಲ ಅಂಬಾಟಿ ಮತ್ತು ಚಂದ್ರಮಪ್ಪ ತಂಡದ ನೇತೃತ್ವದ ಸಿಬಂದಿಯವರ ತಂಡವು ಆರೋಪಿಯ ಪತ್ತೆಗೆ ಜಾಲ ಬೀಸಲಾಗಿತ್ತು.
ಸಂಶಯಾಸ್ಪದ ರೀತಿಯಲ್ಲಿ ಓಡಾಡುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಗುಡಿಯಲ್ಲಿ ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದು, ಆತನ ಬಳಿ ಒಟ್ಟು 1,80,500 ರೂ., ಬಂಗಾರ, ಬೆಳ್ಳಿ, ಆಭರಣಗಳನ್ನು ಜಪ್ತಿಪಡಿಸಿಕೊಂಡು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತಾಗಿ ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.