ಕಲಬುರಗಿ | ರಾಮಕೃಷ್ಣ ಬಡಶೇಷಿ, ಹನುಮಂತರಾವ್ ದೊಡ್ಡಮನಿಗೆ ʼಕನ್ನಡ ರಾಜ್ಯೋತ್ಸವ ಪ್ರಶಸ್ತಿʼ

Update: 2024-10-30 14:51 GMT

ಡಾ.ಹನುಮಂತರಾವ್ ದೊಡ್ಡಮನಿ/ರಾಮಕೃಷ್ಣ ಬಡಶೇಷಿ

ಕಲಬುರಗಿ : 2024ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದ್ದು, ಕಲಬುರಗಿ ಜಿಲ್ಲೆಯ ಇಬ್ಬರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಮಾಧ್ಯಮ ಕ್ಷೇತ್ರದಿಂದ ಹಿರಿಯ ಪತ್ರಕರ್ತ ರಾಮಕೃಷ್ಣ ಬಡಶೇಷಿ ಹಾಗೂ ಸಾಹಿತ್ಯ ಕ್ಷೇತ್ರದಿಂದ ಹಿರಿಯ ಸಾಹಿತಿ ಹನುಮಂತರಾವ್ ದೊಡ್ಡಮನಿ ಅವರಿಗೆ ಈ ಪ್ರಶಸ್ತಿ ಒಲಿದು ಬಂದಿದೆ.

ರಾಮಕೃಷ್ಣ ಬಡಶೇಷಿ: 1961ರ ಜೂನ್ 19 ರಂದು ಜನಿಸಿದ ರಾಮಕೃಷ್ಣ ಬಡಶೇಷಿ ಅವರು ಸುಮಾರು 42 ವರ್ಷಗಳ ಕಾಲ ಪತ್ರಿಕಾ ರಂಗದಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಬಿಕಾಂ, ಪಿ.ಜಿ.ಡಿ. ಬಿ.ಎಂ ಪದವೀಧರರಾಗಿರುವ ಬಡಶೇಷಿ, 1982ರಲ್ಲಿ ಮುಂಜಾನೆ ಮತ್ತು ಟೈಮ್ಸ್ ಆಫ್ ಡೆಕ್ಕನ್ ದೈನಿಕ ಪತ್ರಿಕೆಯ ಬೀದರ್ ಜಿಲ್ಲಾ ಪ್ರತಿನಿಧಿಯಾಗುವ ಮೂಲಕ ಮಾಧ್ಯಮ ರಂಗಕ್ಕೆ ಪ್ರವೇಶಿಸಿದ್ದರು. ಈವರೆಗೆ ಅವರು 'ಕನ್ನಡಮ್ಮ ದೈನಿಕ', ಯು.ಎನ್.ಐ, ಟೈಮ್ಸ್ ಆಫ್ ಇಂಡಿಯಾ, ಉದಯವಾಣಿ ಪತ್ರಿಕೆಯ ವರದಿಗಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇದೀಗ ಅವರು 2008ರಿಂದ ದಿ ನ್ಯೂ ಇಂಡಿಯನ್ ಎಕ್ಸಪ್ರೆಸ್‌ನ ಕಲಬುರಗಿಯ ವಿಶೇಷ ವರದಿಗಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಡಾ.ಹನುಮಂತರಾವ್ ದೊಡ್ಡಮನಿ: ಇವರು ಮೂಲತಃ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಮಲ್ಲಬಾದ್ ಗ್ರಾಮದವರು. 1958ರ ಜೂನ್ 1 ರಂದು ಜನಿಸಿದ ಅವರು, ಪ್ರಾಥಮಿಕ ವಿದ್ಯಾಭ್ಯಾಸದಲ್ಲಿ ಜನಪದ ಹಾಡು, ಕುಣಿತಗಳಲ್ಲಿ ಆಸಕ್ತಿ ಹೊಂದಿದ್ದರು. ಎಸ್ಸೆಸ್ಸೆಲ್ಸಿಯಲ್ಲಿ ತೀಕ್ಷ್ಣ ಬುದ್ಧಿವಂತರಾಗಿದ್ದ ಅವರು ಬಿಎ ಪದವಿ ಮುಗಿಸಿಕೊಂಡು ಮುಂಬೈನಲ್ಲಿ ಕೆಲಸ ಗಿಟ್ಟಿಸಿಕೊಂಡರು. ಬಳಿಕ ಅವರು ಡಾಕ್ಟರೇಟ್ ಪದವಿ ಪಡೆದು ಹಲವು ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದರು.

'ಘತ್ತರಗಿ ಭಾಗ್ಯಮ್ಮ' ಸೇರಿದಂತೆ 30ಕ್ಕೊ ಹೆಚ್ಚಿನ ಕೃತಿಗಳನ್ನು ರಚಿಸಿರುವ ಇವರು, ಅಫಜಲಪುರ ತಾಲ್ಲೂಕಿನ 3ನೇ ತಾಲೂಕು ಸಮ್ಮೇಳನ ಮತ್ತು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಗೌರವ ಸ್ವೀಕರಿಸಿದ್ದಾರೆ.

ಗುಲಬರ್ಗಾ ವಿವಿ ನೀಡುವ ರಾಜ್ಯೋತ್ಸವ, ಡಿವಿಜಿ ಪ್ರಶಸ್ತಿ ಸೇರಿ ಹಲವು ಮಹತ್ವದ ಪ್ರಶಸ್ತಿಗಳನ್ನು ಪಡೆದಿರುವ ಹನುಮಂತರಾವ್ ದೊಡ್ಡಮನಿಯನ್ನು  ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ರಾಜ್ಯ ಸರಕಾರ ಆಯ್ಕೆ ಮಾಡಿದೆ.

ಕಲಬುರಗಿ ಮೂಲದವರಾದ ಪ್ರಭು ಹರಸೂರ ಅವರನ್ನು ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಚಿತ್ರಕಲೆ ಕ್ಷೇತ್ರದಲ್ಲಿನ ಅವರ ಸಾಧನೆಯನ್ನು ಪರಿಗಣಿಸಿ ಸರಕಾರ, ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿದೆ. ಪ್ರಸ್ತುತ ಇವರು ತುಮಕೂರಿನಲ್ಲಿ ನೆಲೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News