ಪತ್ರಕರ್ತರಲ್ಲಿ ಓದುವ ಅಭ್ಯಾಸವೇ ಇಲ್ಲವಾಗುತ್ತಿರುವುದು ಶೋಚನೀಯ : ಕೆ.ವಿ.ಪ್ರಭಾಕರ್

Update: 2024-07-29 17:55 GMT

ಕಲಬುರಗಿ : ಪತ್ರಕರ್ತರಲ್ಲಿ ಓದುವ ಅಭ್ಯಾಸವೇ ಇಲ್ಲವಾಗುತ್ತಿರುವುದು ಶೋಚನೀಯ ಎಂದು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಇಂದಿಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ಸೋಮವಾರ ಕಾರ್ಯನಿರತ ಪತ್ರಕರ್ತರ ಸಂಘದ ಕಲಬುರಗಿ ಜಿಲ್ಲಾ ಘಟಕ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಹಿಪಾಲ ರೆಡ್ಡಿಯವರ ‘ಬೆಳಕು ತಾಕಿದ ಬೆರಳು’, ಮನೋಜಕುಮಾರ ಗುದ್ದಿ ಅವರ ‘ಗಾಂಧೀಜಿಯ ಹಂತಕ’, ಸಂಗಮನಾಥ ರೇವತಗಾಂವ ಅವರ ‘ಕೊರೋನ ಕನವರಿಸುವ ವಚನಗಳು’ ಕೃತಿಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.

‘ಮೊಬೈಲು ಗೀಳು ಹೆಚ್ಚಾದ ಬಳಿಕ ಇತರೆ ಕ್ಷೇತ್ರಗಳಂತೆ ಪತ್ರಕರ್ತರೂ ಓದುವ ಅಭ್ಯಾಸದಿಂದ ದೂರವಾಗಿದ್ದಾರೆ. ಏನನ್ನೂ ಓದದೆ ಎಲ್ಲವನ್ನೂ ಬರೆಯುತ್ತೇವೆ ಎನ್ನುವವರು ಹೆಚ್ಚಾಗುತ್ತಿರುವುದು ಪತ್ರಿಕಾ ವೃತ್ತಿಗೆ ತಗುಲಿರುವ ಶಾಪ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಪತ್ರಿಕೋಧ್ಯಮದಿಂದ ರಾಜಕಾರಣದವರೆಗೆ ಎಲ್ಲಾ ಕ್ಷೇತ್ರಗಳಲ್ಲೂ ಗುಣಮಟ್ಟ ಕಡಿಮೆ ಆಗುತ್ತಿದೆ. ಬಿ.ಆರ್. ಪಾಟೀಲರಂತಹ ಮುತ್ಸದ್ದಿ ರಾಜಕಾರಣಗಳು ಈಗಿನ ತಲೆಮಾರಿನಲ್ಲಿ ಕಾಣಿಸುತ್ತಲೇ ಇಲ್ಲ. ಅಧಿವೇಶನಕ್ಕೆ ಶಾಸಕರುಗಳನ್ನು ಕರೆ ತರುವುದೇ ದೊಡ್ಡ ಸಾಹಸ ಎನ್ನುವಂತಾಗಿದೆ ಎದು ಅವರು ನುಡಿದರು.

ಅಧ್ಯಯನಶೀಲತೆಯಿಂದ ಯುವ ಜನಾಂಗ ಮತ್ತು ಮಕ್ಕಳು ದೂರವಾಗುತ್ತಿರುವುದು ಎಲ್ಲ ಕ್ಷೇತ್ರಗಳ ಗುಣಮಟ್ಟ ಕುಸಿಯಲು ಕಾರಣವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಸಿಎಂ ರಾಜಕೀಯ ಸಲಹೆಗಾರ ಬಿ.ಆರ್.ಪಾಟೀಲ್, ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News