ಕಲಬುರಗಿ | ಜಿಲ್ಲೆಯ ಜೈವಿಕ ಸಂಸ್ಥೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ನೆರೆ ಜಿಲ್ಲೆಗೆ ಹಸ್ತಾಂತರಿಸಲು ಜಿಲ್ಲಾಧಿಕಾರಿ ಸೂಚನೆ

Update: 2024-12-12 12:13 GMT

ಕಲಬುರಗಿ : ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಜಲ ಕಾಯ್ದೆ-1974 ಮತ್ತು ವಾಯು ಕಾಯ್ದೆ-1981 ಉಲ್ಲಂಘನೆ ಹಿನ್ನೆಲೆಯಲ್ಲಿ ಕಲಬುರಗಿ ನಗರದ ಅಫಜಲ್ ಪುರ ರಸ್ತೆಯ ಶರಣಸಿರಸಗಿ ಗ್ರಾಮದ ಸರ್ವೆ ನಂ.139ರಲ್ಲಿರುವ ಮೇ. ಬೃಂದಾವನ ಫೌಂಡೇಶನ್ (CBMWTF) ಘಟಕಕ್ಕೆ ಕಳೆದ ಡಿ.7 ರಂದು ಮುಚ್ಚುವ ಆದೇಶ ಜಾರಿಗೊಳಿಸಿರುವುದರಿಂದ ಪರ್ಯಾವಾಗಿ ಜಿಲ್ಲೆಯ ಜೀವ ವೈದ್ಯಕೀಯ ಸಂಸ್ಥೆಗಳಿಂದ (Health Care Establishment’s) ಉತ್ಪತ್ತಿಯಗುವ ಜೀವ ವೈದ್ಯಕೀಯ ತ್ಯಾಜ್ಯವನ್ನು ನೆರೆಯ ಯಾದಗಿರಿ ಮತ್ತು ಬೀದರ್ ಜಿಲ್ಲೆಯಲ್ಲಿನ ಜೈವಿಕ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಹಸ್ತಾಂತರಿಸುವಂತೆ ಜಿಲ್ಲೆಯ ಜೀವ ವೈದ್ಯಕೀಯ ಸಂಸ್ಥೆಗಳಿಗೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಜೈವಿಕ ತ್ಯಾಜ್ಯ ನಿರ್ವಹಣೆ ಮೇಲ್ವಿಚಾರಣೆ ಸಮಿತಿ ಅಧ್ಯಕ್ಷೆ ಬಿ.ಫೌಝಿಯಾ ತರನ್ನುಮ್ ಸೂಚಿಸಿದ್ದಾರೆ.

ಈ ಸಂಬಂಧ ಈಗಾಗಲೇ ಬೀದರ್ ಮತ್ತು ಯಾದಗಿರಿ ಜಿಲ್ಲೆಯ ಜೈವಿಕ ತ್ಯಾಜ್ಯ ನಿರ್ವಹಣಾ ಘಟಕಗಳೊಂದಿಗೆ ಚರ್ಚಿಸಿದ್ದು, ಅವರು ವೈದ್ಯಕೀಯ ತ್ಯಾಜ್ಯ ಪಡೆಯಲು ಒಪ್ಪಿಕೊಂಡಿರುತ್ತಾರೆ ಎಂದು ಡಿ.ಸಿ. ಸ್ಪಷ್ಟಪಡಿಸಿದ್ದಾರೆ.

ಜಿಲ್ಲೆಯ ಸೇಡಂ, ಚಿತ್ತಾಪೂರ, ಜೇವರ್ಗಿ ತಾಲ್ಲೂಕು ಹಾಗೂ ಕಲಬುರಗಿ ನಗರದ ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಯಲ್ಲಿನ ಜೀವ ವೈದ್ಯಕೀಯ ಸಂಸ್ಥೆಗಳಿಂದ ಉತ್ಪತ್ತಿಯಾಗುವ ಜೈವಿಕ ತ್ಯಾಜ್ಯವನ್ನು ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನ ಬಬಲಾದ ಗ್ರಾಮದ ಸರ್ವೆ ನಂ.18ರಲ್ಲಿರುವ ಮೆ.ಪರಿಸರ ಅಸೋಸಿಯೇಟ್ಸ್ ಜೈವಿಕ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಹಸ್ತಾಂತರಿಸಬೇಕು. ಘಟಕದ ಸುರೇಶ ಬಿಲ್ಹಾರ, ಮೊಬೈಲ್ ಸಂ.7760479442 ಮತ್ತು ಇ-ಮೇಲ್ parisara.associates@gmail.com ಮೂಲಕ ಸಂಪರ್ಕಿಸಬಹುದಾಗಿದೆ.

ಅದೇ ರೀತಿ ಜಿಲ್ಲೆಯ ಆಳಂದ, ಅಫಜಲ್ ಪುರ, ಚಿಂಚೋಳಿ ತಾಲ್ಲೂಕು ಹಾಗೂ ಕಲಬುರಗಿ ನಗರದ ಉತ್ತರ ಮತಕ್ಷೇತ್ರದ ವ್ಯಾಪ್ತಿಯಲ್ಲಿನ ಜೀವ ವೈದ್ಯಕೀಯ ಸಂಸ್ಥೆಗಳು ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಧನ್ನೂರ ಗ್ರಾಮದ ಸರ್ವೇ ನಂ.119ರಲ್ಲಿರುವ ಮೆ.ಎನ್ವಿರೋ ಬಯೋಟೆಕ್ ಜೈವಿಕ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ತಮ್ಮಲ್ಲಿ ಉತ್ಪತ್ತಿಯಾಗುವ ಜೈವಿಕ ತ್ಯಾಜ್ಯವನ್ನು ಹಸ್ತಾಂತರಿಸಬೇಕು. ಈ ಸಂಸ್ಥೆಯ ಡಾ. ಮಕ್ಸೂದ ಚಾಂದ್-8310285507, ಕಚೇರಿ ವಿಳಾಸ: ಸಂಖ್ಯೆ.7-1-35, ನೆಲಮಹಡಿ, ಭೀಮನಗರ ರಸ್ತೆ, ತಳವಾಡಿ, ಬೀದರ್-585401 ಮತ್ತು ಇ-ಮೇಲ್ ವಿಳಾಸ envirobiotechbmw@gmail.com ಮೂಲಕ ಸಂಪರ್ಕಿಸಬಹುದು.

ಕಲಬುರಗಿ ಜಿಲ್ಲೆಯ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ದೈನಂದಿನವಾಗಿ ಉತ್ಪತ್ತಿಯಾಗುತ್ತಿರುವ ತ್ಯಾಜ್ಯವನ್ನು ಜೈವಿಕ ವೈಧ್ಯಕೀಯ ತ್ಯಾಜ್ಯ ನಿರ್ವಹಣೆ ಅಧಿನಿಯಮ-2016ರಂತೆ ಜಿಲ್ಲಾಡಳಿತದಿಂದ ನೇಮಿಸಲ್ಪಟ್ಟ ಮೇಲ್ಕಂಡ ಸಂಸ್ಥೆಯವರಿಗೆ ಹಸ್ತಾಂತರಿಸಬೇಕೆಂದು ಜಿಲ್ಲಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News