ಐದು ಗ್ಯಾರಂಟಿಗಳ ಸಮರ್ಪಕ ಜಾರಿಗೆ ಅಗತ್ಯ ಕ್ರಮ: ಸಚಿವ ಪ್ರಿಯಾಂಕ್ ಖರ್ಗೆ
ಕಲಬುರಗಿ: ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಐದು ಗ್ಯಾರಂಟಿಗಳನ್ನು ಜಾರಿಗೆ ತರುವ ಮೂಲಕ ಕೊಟ್ಟ ಮಾತು ಉಳಿಸಿಕೊಂಡಿದೆ. ಜೊತೆಗೆ ಐದು ಗ್ಯಾರಂಟಿಗಳ ಸಮರ್ಪಕ ಅನುಷ್ಠಾನಕ್ಕೆ ಅಗತ್ಯ ಕ್ರಮವಹಿಸಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ದಿ ಸಂಸ್ಥೆ ಕಲಬುರಗಿ ವತಿಯಿಂದ 2019-20 ಸಾಲಿನ ಡಿಎಮ್ಎಫ್ ಯೋಜನೆಯಡಿಯಲ್ಲಿ ಚಿತ್ತಾಪುರ ತಾಲೂಕಿನ ಸಾವಂತಖೇಡ ಗ್ರಾಮದಿಂದ ಜೀವನ ಮಾರಡಗಿವರೆಗೆ ರಸ್ತೆ ಸುಧಾರಣೆ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ರಾಜ್ಯದ ಸರ್ವಾಂಗೀಣ ಅಭಿವೃದ್ದಿಗೆ ಸರ್ಕಾರ ಬದ್ಧವಾಗಿದ್ದು ರಸ್ತೆ, ಕುಡಿಯುವ ನೀರು, ರಸ್ತೆ ನಿರ್ಮಾಣದಂತ ಮೂಲಭೂತ ಸೌಲಭ್ಯ ಒದಗಿಸುವದಕ್ಕೆ ಮೊದಲ ಆದ್ಯತೆ ನೀಡಲಾಗುವುದು. ಜೊತೆಗೆ ಐದು ಗ್ಯಾರಂಟಿಗಳ ಸಮರ್ಪಕ ಅನುಷ್ಠಾನಕ್ಕೆ ಅಗತ್ಯ ಕ್ರಮವಹಿಸಲಾಗುತ್ತಿದೆ. ಗೃಹಲಕ್ಷ್ಮೀ, ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯ ಹಾಗೂ ಯುವನಿಧಿ ಯೋಜನೆಗಳು ಫಲಾನುಭವಿಗಳಿಗೆ ತಲುಪಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ಈ ಬಗ್ಗೆ ಬಿಜೆಪಿಯವರು ಏನೇ ಹೇಳಿದರೂ ಯಾರೂ ಗಂಭೀರವಾಗಿ ಪರಿಗಣಿಸಬಾರದು ಎಂದು ಮನವಿ ಮಾಡಿದರು.
ರಾಜ್ಯ ಸರ್ಕಾರ ಆಳುವ ಸರ್ಕಾರ ಬದಲಿಗೆ ಆಲಿಸುವ ಸರ್ಕಾರವಾಗಿದೆ. ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ವಿಧಾನಸೌಧವನ್ನು ವ್ಯಾಪಾರಸೌಧವನ್ನಾಗಿ ಮಾಡಿದ್ದರು. ಆದರೆ ನಾವು ಅಧಿಕಾರಕ್ಕೆ ಬಂದ ಮೇಲೆ ವಿಧಾನಸೌಧವನ್ನು ಸಾರ್ವಜನಿಕರಿಗೆ ಮುಕ್ತವಾಗಿಸಿದ್ದೇವೆ. ನಿನ್ನೆ ನಡೆದ ಸಾರ್ವಜನಿಕರ ಆವಾಹಲು ( ಜನಸ್ಪಂದನ ) ಕಾರ್ಯಕ್ರಮದಲ್ಲಿ ಸುಮಾರು 20,000 ಜನರು ಭಾಗವಹಿಸಿ ತಮ್ಮ ಕುಂದುಕೊರತೆಗಳನ್ನು ಸಿಎಂ ಅವರ ಗಮನಕ್ಕೆ ತಂದು, ಪರಿಹಾರ ಕಂಡುಕೊಂಡರು. ಇದು ಜನಪರ ಸರ್ಕಾರವೊಂದರ ಬದ್ದತೆಯ ಪ್ರತೀಕವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ರೇಲ್ವೆ ವಲಯ, ನಿಮ್ಝ್ ಸೇರಿದಂತೆ ಹಲವಾರು ಅಭಿವೃದ್ದಿ ಪರವಾದ ಯೋಜನೆಗಳು ಮಂಜೂರಾಗಿದ್ದರೂ ಕೂಡಾ ಜಾರಿಗೆ ಬಂದಿಲ್ಲ. ಕಾರಣ, ಕೇಂದ್ರ ಸರ್ಕಾರದ ಹಾಗೂ ಕಲಬುರಗಿ ಸಂಸದರ ನಿರ್ಲಕ್ಷ್ಯತನ ಎಂದು ದೂರಿದರು. ಕೇಂದ್ರ ಸರ್ಕಾರದ ನಿರ್ಲಕ್ಷ್ಯತನ ಎಷ್ಟು ಮುಂದುವರೆದಿದೆ ಎಂದರೆ ನಮ್ಮ ರಾಜ್ಯ ಸರ್ಕಾರಕ್ಕೆ ಬರಬೇಕಿದ್ದ ಅನುದಾನದ ಪಾಲು ಸರಿಯಾಗಿ ಕೊಡುತ್ತಿಲ್ಲ. ಈ ಬಗ್ಗೆ ನಾವು ಕೇಳಲು ದೆಹಲಿಗೆ ಹೋಗಿ ಪ್ರತಿಭಟನೆ ಮಾಡಿ ಬಂದೆವು ಎಂದು ಕೇಂದ್ರದ ವಿರುದ್ದ ಹರಿಹಾಯ್ದರು.
ವೇದಿಕೆಯ ಮೇಲೆ ಜಿಪಂ ಮಾಜಿ ಅಧ್ಯಕ್ಷ ರಮೇಶ ಮರಗೋಳ, ರಾಜೇಶ್ ಗುತ್ತೇದಾರ ಸೇರಿದಂತೆ ಹಲವರಿದ್ದರು.