ರಾಮ ಮಂದಿರ ಉದ್ಘಾಟನೆ ಇಡೀ ಜಗತ್ತಿನ ಸಂಭ್ರಮ ಎಂದು ಬಿಂಬಿಸುತ್ತಿರುವುದು ಅಶ್ಚರ್ಯಕರ: ಮೂಡ್ನಾಕೂಡು ಚಿನ್ನಸ್ವಾಮಿ
ಬೆಂಗಳೂರು: ರಾಮ ಮಂದಿರ ಉದ್ಘಾಟನೆ ಇಡೀ ಜಗತ್ತಿನ ಸಂಭ್ರಮ ಎಂದು ಬಿಂಬಿಸುತ್ತಿರುವುದು ಅಶ್ಚರ್ಯವಾಗುತ್ತಿದ್ದು, ಮಂದಿರಕ್ಕೆ ದಲಿತರ ಹಣ ಬೇಡ ಎಂದು ಹೇಳಿರುವ ಅವಮಾನಕರ ಘಟನೆಯನ್ನು ವಿರೋಧಿಸದೆ ಮಂದಿರ ಉದ್ಘಾಟನೆಗೆ ದಲಿತರು ಭಾಗವಹಿಸುತ್ತಿದ್ದಾರೆ ಎಂದು ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.
ರವಿವಾರ ಕಲಬುರಗಿ ನಗರದಲ್ಲಿ ಸಮುದಾಯ ಸಂಘಟನೆ, ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಆಯೋಜಿಸಿದ್ದ 'ಸಂವಿಧಾನ ದುರಿತ ಕಾಲದಲ್ಲಿ ಮತ್ತೆ ಕವಿಮಾರ್ಗ' ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.
ರಾಜಸ್ಥಾನದಲ್ಲಿ ರಾಮಮಂದಿರಕ್ಕೆ ದಲಿತರೊಬ್ಬರು ಹಣ ಕೊಟ್ಟರೆ ಬೇಡ ಎಂದಿದ್ದಾರೆ. ಇಂಥವು ಘಟನೆಗಳೇ ಅಲ್ಲ ಎನ್ನುವ ರೀತಿ ಮಂದಿರ ಉದ್ಘಾಟನೆಗೆ ದಲಿತರೂ ಭಾಗವಹಿಸಿದ್ದಾರೆ. ಇದು ಜಾತಿ, ಅಸ್ಪೃಶ್ಯತೆ ಇರುವ ಧರ್ಮವಾಗಿದೆ. ಮಂತ್ರಿಗಳು ಅಕ್ಷತೆ ಕೊಡುತ್ತಿದ್ದಾರೆ. ಧರ್ಮದಿಂದಲೇ ತಾರತಮ್ಯಕ್ಕೆ ಪ್ರೇರಣೆ ಸಿಗುತ್ತಿದೆ ಎಂದರು.
ಈಗ ಸಂವಿಧಾನವನ್ನು ಮೆಚ್ಚುತ್ತಲೇ ಮರೆಮಾಚುವುದನ್ನು ಕಲಿತ ಸರಕಾರ ಅಧಿಕಾರದಲ್ಲಿ ಇದೆ. ಎಲ್ಲೆಲ್ಲೂ ಹಿಂದುತ್ವದ ಭರಾಟೆ ರಾಚುತ್ತಿದೆ. ಒಂದು ಟ್ರಸ್ಟ್ ಮಾಡಬಹುದಾದ ಕೆಲಸವನ್ನು ಇಡೀ ದೇಶವೇ ಮಾಡುತ್ತಿದೆ ಎನ್ನುವಂತೆ ಬಿಂಬಿಸಲಾಗುತ್ತಿದೆ. ಸಾಂವಿಧಾನಿಕ ಅಧಿಕಾರಿ ಅಲ್ಲಿ ಇರುವುದೇ ಅಸಾಂವಿಧಾನಿಕವಾಗಿದೆ ಎಂದು ತಿಳಿಸಿದರು.
ಅದನ್ನು ಅನುಷ್ಠಾನಗೊಳಿಸುತ್ತಿರುವವರು ಮೇಲ್ಜಾತಿಯವರಾಗಿದ್ದು, ಅವರ ಕೈಯಲ್ಲೇ ಅಧಿಕಾರ, ಸಂಪತ್ತು ಇರುವುದರಿಂದ ಇಷ್ಟು ಆರ್ಭಟ ನಡೆಯುತ್ತದೆ. ಮೇಲ್ವಾತಿಯ ಪಾಪಪ್ರಜ್ಞೆ, ಕೆಳ ಜಾತಿಗಳ ಜಾಗೃತ ಪ್ರಜ್ಞೆಗಳು ಒಂದೇ ಬಿಂದುವಿನಲ್ಲಿ ಒಂದಾದಾಗ ಸಾಮಾಜಿಕ ಸಮಾನತೆ ಸಾಧ್ಯ ಎಂದು ಅವರು ತಿಳಿಸಿದರು.