ಕೌಟುಂಬಿಕ ಕಲಹ: ಆತ್ಮಹತ್ಯೆಗೆ ಯತ್ನಿಸಿದ ಪತ್ನಿಯನ್ನು ರಕ್ಷಿಸಲು ನದಿಗೆ ಹಾರಿದ ಪತಿ, ಸಹೋದರ ಸಂಬಂಧಿ ಮೃತ್ಯು

Update: 2024-07-31 05:34 GMT

ಶಿವಕುಮಾರ ಕಣ್ಣಿ | ರಾಜ್ ಕುಮಾರ್ ಅಂಕಲಗಿ

ಕಲಬುರಗಿ: ಕೌಟುಂಬಿಕ ಕಲಹದ ಹಿನ್ನೆಲೆ ದೇವಣಗಾಂವ ಸೇತುವೆ ಮೇಲಿಂದ ಸೊನ್ನ ಭೀಮಾ ನದಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ರಕ್ಷಿಸಲು ನದಿಗೆ ಹಾರಿದ ಆಕೆಯ ಪತಿ ಹಾಗೂ ಸಹೋದರ ಸಂಬಂಧಿ ಇಬ್ಬರ ಶವ ಬುಧವಾರ ನಸುಕಿನ ಜಾವ ಭೀಮಾ ನದಿಯ ಸೊನ್ನ ಗ್ರಾಮದ ಬಳಿ ಪತ್ತೆಯಾಗಿದೆ.

ಮೃತರನ್ನು ಅಫಜಲಪುರ ತಾಲೂಕಿನ ಶಿವಕುಮಾರ ಕಣ್ಣಿ (36) ಮತ್ತು ರಾಜು ಅಂಕಲಗಿ (39)  ಎಂದು ಗುರುತಿಸಲಾಗಿದೆ.

ಘಟನೆಯ ವಿವರ: ಕೌಟುಂಬಿಕ ಕಲಹದ ಹಿನ್ನೆಲೆ ಅಫಜಲಪುರ ಪಟ್ಟಣದ ನಿವಾಸಿ ಲಕ್ಮೀ ಶಿವಕುಮಾರ ಕಣ್ಣಿ ಎಂಬವರು ಸೋಮವಾರ ಸಂಜೆ ಸೇತುವೆ ಮೇಲಿಂದ ಭೀಮಾ‌ ನದಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಅವರ ರಕ್ಷಣೆಗೆ ಗಂಡ ಶಿವಕುಮಾರ ಕಣ್ಣಿ (36) ಹಾಗೂ ಲಕ್ಷೀ ತಂಗಿಯ ಪತಿ ರಾಜ್ ಕುಮಾರ್ ಅಂಕಲಗಿ ಅಂಕಲಗಿ (39) ಕೂಡಲೇ ನದಿಗೆ ಧುಮುಕಿದ್ದಾರೆ. ಆದರೆ ಮಹಿಳೆಯನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದಾರೆ ಎನ್ನಲಾಗಿದೆ.

ಪತ್ನಿಯ ರಕ್ಷಣೆಗೆ ಧಾವಿಸಿದ ಪತಿ ಶಿವಕುಮಾರ ಕಣ್ಣಿ ಹಾಗೂ ಸಹೋದರ ಸಂಬಂಧಿ ರಾಜು ಅಂಕಲಗಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದರು. ಅಗ್ನಿಶಾಮಕ ಸಿಬ್ಬಂದಿ ಸಂಜೆವರೆಗೂ ರಕ್ಷಣಾ ಕಾರ್ಯಚರಣೆ ನಡೆಸಿದರೂ ಪತ್ತೆಯಾಗಿರಲಿಲ್ಲ. ಹೀಗಾಗಿ ಬುಧವಾರ ಬೆಳಿಗ್ಗೆಯಿಂದ ಮತ್ತೆ ಕಾರ್ಯಾಚರಣೆ ನಡೆಸಿದಾಗ ಇಬ್ಬರ ಮೃತದೇಹ ಪತ್ತೆಯಾಗಿದೆ.

ಘಟನಾ ಸ್ಥಳಕ್ಕೆ ಕಲಬುರಗಿ ಎಸ್ಪಿ ಅಡ್ಡೂರು ಶ್ರೀನಿವಾಸುಲು ಭೇಟಿ ನೀಡಿ ಘಟನೆ ಕುರಿತಂತೆ ಕುಟುಂಬಸ್ಥರು ಹಾಗೂ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದ್ದಿದ್ದಾರೆ. ಈ ವೇಳೆ ಸಿಪಿಐ ಚನ್ನಯ್ಯ ಹಿರೇಮಠ, ಪಿಎಸ್ಐ ಸೋಮಲಿಂಗ ಒಡೆಯರ್ ಹಾಜರಿದ್ದರು.

ಅಫಜಲಪುರ ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳಾದ ಅಶೋಕ ಜಮಾದಾರ, ಪ್ರಕಾಶ ಮೇತ್ರಿ, ಶಿವಾನಂದ ಕುಂಬಾರ, ರಮೇಶ ರೆಡ್ಡಿ, ಗಜಾನಂದ , ಸಿದ್ದಲಿಂಗ, ಸುನೀಲ ಕಾರ್ಯಾಚರಣೆ ನಡೆಸಿದರು.

ಈ ಕುರಿತು ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News