ನ.15ರಿಂದ ಸನ್ನತಿಯಿಂದ ಬೆಂಗಳೂರಿಗೆ ಪಂಚಶೀಲ ಪಾದಯಾತ್ರೆ : ಪೂಜ್ಯ ಭಂತೆ ವರಜ್ಯೋತಿ
ಕಲಬುರಗಿ : ವಿಶ್ವಶಾಂತಿಗಾಗಿ, ಸನ್ನತ್ತಿಯ ಸಮಗ್ರ ಅಭಿವೃದ್ಧಿಗಾಗಿ ಒತ್ತಾಯಿಸಿ ಹಾಗೂ ಬೌದ್ಧ ಸಮುದಾಯದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಐತಿಹಾಸಿಕ ಕ್ಷೇತ್ರ ಸನ್ನತ್ತಿಯಿಂದ ಬೆಂಗಳೂರು ವಿಧಾನ ಸೌಧದವರೆಗೆ ಪೂಜ್ಯ ಬೋಧಿದತ್ತ ಭಂತೆಯವರ ನೇತೃತ್ವದಲ್ಲಿ 'ಪಂಚಶೀಲ ಪಾದಯಾತ್ರೆ' ಇದೇ ನ.15ರಿಂದ ಪ್ರಾರಂಭಿಸಲಾಗುತ್ತಿದೆ ಎಂದು ಬೀದರ್ನ ಅಣದೂರ ಬುದ್ಧ ವಿಹಾರದ ಪೂಜ್ಯ ಭಂತೆ ವರಜ್ಯೋತಿ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲ್ಲೂಕಿನ ಸನ್ನತ್ತಿಯಿಂದ ಬೆಂಗಳೂರು ವಿಧಾನ ಸೌಧದವರೆಗೆ ನಡೆಯಲಿರುವ 70 ದಿನಗಳ ಪಾದಯಾತ್ರೆಯು ಸುಮಾರು 1,000 ಕಿ.ಮೀ. ಕ್ರಮಿಸಲಿದೆ. ರಾಜ್ಯದ 8 ಜಿಲ್ಲೆಗಳನ್ನು ಹಾದು ಹೋಗಲಿರುವ ಈ ಶಾಂತಿ ಪಾದಯಾತ್ರೆಯುದ್ದಕ್ಕೂ ವಿವಿಧ ಗ್ರಾಮಗಳಲ್ಲಿ ಇದರ ಉದ್ದೇಶ ಮತ್ತು ಬೇಡಿಕೆಗಳ ಕುರಿತು ಮನವರಿಕೆ ಮಾಡಿಕೊಡುವುದಲ್ಲದೆ, ಮಹಾತ್ಮಗೌತಮ ಬುದ್ಧರ ಅಸ್ಥಿಯ ದರ್ಶನಕ್ಕೆ ಅವಕಾಶ ನೀಡಲಾಗುವುದು. ಅಲ್ಲದೆ, ಪಾದಯಾತ್ರೆ ಉದ್ದಕ್ಕೂ ಬುದ್ಧ, ಅಶೋಕನ ಭಾವಚಿತ್ರಗಳು ರಾರಾಜಿಸಲಿವೆ ಎಂದು ತಿಳಿಸಿದರು.
ಪಾದಯಾತ್ರೆ ವಿಧಾನಸೌಧ ತಲುಪಿದ ಬಳಿಕ ವಿವಿಧ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು ಎಂದರು.
ಸನ್ನತ್ತಿ ಅಭಿವೃದ್ಧಿ ಪ್ರಾಧಿಕಾರದ ಯೋಜನೆಯನ್ನು ಆಂಧ್ರದ ಬುದ್ದನ ಮಾದರಿಯಲ್ಲಿ ಸುಮಾರು 200 ಎಕರೆ ಪ್ರದೇಶದಲ್ಲಿ ಸಮಗ್ರವಾಗಿ ಅಭಿವೃದ್ಧಿ ಪಡಿಸಿ, ಜಾಗತಿಕ ಮಟ್ಟದ ಸೆವೆನ್ ಸ್ಟಾರ್ ಪ್ರವಾಸಿ ತಾಣವನ್ನಾಗಿ ಮಾಡಲು 500 ಕೋಟಿ ರೂ.ಅನುದಾನ ನಿಗದಿಪಡಿಸಬೇಕು. ಫೆ.12ರಂದು ಅಶೋಕನ ಸನ್ನತ್ತಿ ಉತ್ಸವವನ್ನು ಸರಕಾರದ ವತಿಯಿಂದ ಆಚರಿಸಬೇಕು. ಬೌದ್ಧರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕಾಗಿ ಸರಕಾರ ಬೌದ್ಧ ಅಭಿವೃದ್ಧಿ ನಿಗಮ ಪ್ರಾರಂಭಿಸಬೇಕು. ಬುದ್ದನ ಜಯಂತಿಯನ್ನು ಬುದ್ಧಪೂರ್ಣಿಮಾ ದಿನದಂದು ಸಾರ್ವತ್ರಿಕ ರಜೆ ಘೋಷಣೆ ಮಾಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಲಾಗುವುದು ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಪೂಜ್ಯ ಭಂತೆ ನಾಗರತ್ನ, ಪೂಜ್ಯ ಭಂತೆ ಧಮ್ಮ ದೀಪ, ಸುರೇಶ ಕಾನೇಕರ್ ಉಪಸ್ಥಿತರಿದ್ದರು.