ಪ್ರಜ್ವಲ್ ರೇವಣ್ಣ ಪ್ರಕರಣ | ಮುಖ್ಯಮಂತ್ರಿಗೆ ಪ್ರಜ್ಞಾವಂತ ನಾಗರಿಕರಿಂದ ಬಹಿರಂಗ ಪತ್ರ
ಕಲಬುರಗಿ : ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ ಸಂಬಂಧ ದೇವಗೌಡರ ಕುಟುಂಬ ಸೇರಿದಂತೆ ಸಮಗ್ರವಾಗಿ ತನಿಖೆ ನಡೆಸಬೇಕೆಂದು ಒತ್ತಾಯಿಸಿ ಪ್ರಜ್ಞಾವಂತ ನಾಗರಿಕರಿಂದ 16 ಅಂಶಗಳನ್ನು ಒಳಗೊಂಡ ಪತ್ರವನ್ನು ಕಲಬುರಗಿಯಲ್ಲಿ ಬಿಡುಗಡೆ ಮಾಡಲಾಯಿತು.
ನಗರದ ಜಗತ್ ವೃತ್ತದಲ್ಲಿ ಅಖಿಲ ಭಾರತೀಯ ಜನವಾದಿ ಮಹಿಳಾ ಸಂಘಟನೆ ಮುಖಂಡರಾದ ಕೆ.ನೀಲಾ ಅವರ ನೇತೃತ್ವದಲ್ಲಿ ಈ ಪತ್ರವನ್ನು ಮುಖ್ಯಮಂತ್ರಿಗಳಿಗೆ ಬಹಿರಂಗವಾಗಿ ನೀಡಲಾಗುತ್ತಿದ್ದು, ದೇಶದ ಘನತೆಯನ್ನು ಕುಗ್ಗಿಸಿರುವ ಪ್ರಜ್ವಲ್ ರೇವಣ್ಣ ಮತ್ತು ಎಚ್.ಡಿ.ರೇವಣ್ಣ ಅವರ ಕೃತ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೇ ಎಚ್.ಡಿ ರೇವಣ್ಣ ಅವರನ್ನು ಜಾಮೀನು ಮೇಲೆ ಬಿಡುಗಡೆಯಾಗಿರುವುದಕ್ಕೆ ಆರತಿ ಬೆಳಗಿಸಿ ಪೂಜೆ ಮಾಡುವ ಮೂಲಕ ಮಹಿಳಾ ವಿರೋಧಿ ಕೃತ್ಯವನ್ನು ಸಮರ್ಥಿಸಿಕೊಳ್ಳಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಈ ಕೃತ್ಯದ ಕುರಿತು ಎಚ್.ಡಿ ದೇವೆಗೌಡ ಮತ್ತು ಕುಟುಂಬಕ್ಕೆ ಗೊತ್ತಿದ್ದರು ಪರೋಕ್ಷವಾಗಿ ಇದಕ್ಕೆ ಕುಮ್ಮಕು ನೀಡಿದ್ದಾರೆ ಎಂಬುದು ಅನುಮಾನಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು.
ಅಲ್ಲದೇ ಪೆನ್ ಡ್ರೈವ್ ನಲ್ಲಿನ ವಿಡಿಯೋಗಳು ಬಿಡುಗಡೆ ಮಾಡಿದವರ ವಿರುದ್ಧ ಮತ್ತು ಸಹಾಯ ಕೇಳಿ ಬಂದ ಮಹಿಳೆಯರೊಂದಿಗೆ ಅತ್ಯಾಚಾರ ನಡೆಸಿ ಅವರನ್ನು ತನ್ನ ಕಾಮಕಾಂಡಕ್ಕೆ ಬಳಿಸಿಕೊಂಡು ವಿಕೃತ ಮೆರೆದ ಪ್ರಜ್ವಲ್ ರೇವಣ್ಣನಿಗೆ ತಕ್ಷಣ ಬಂಧಿಸಿ ಕಠಿಣ ಶಿಕ್ಷಗೆ ಒಳಪಡಿಸಬೇಕು. ಎಚ್.ಡಿ ದೇವಗೌಡ ಇಡೀ ಕುಟುಂಬವನ್ನು ಎಸ್.ಐ.ಟಿ ತನಿಖೆಗೆ ಒಳಪಡಿಸಿ ಪರೋಕ್ಷವಾಗಿ ಸಹಕರಿಸಿದವರಿಗೂ ಶಿಕ್ಷೆಗೆ ಗುರಿಪಡಿಸಬೇಕೆಂದು ಕೆ.ನೀಲಾ, ಪ್ರಭು ಖಾನಾಪೂರೆ, ಲವಿತ್ರಾ, ರೇಣುಕಾ ಸರಡಗಿ ಸೇರಿದಂತೆ ವಿದ್ಯಾರ್ಥಿಗಳು ಮತ್ತು ಮಹಿಳಾ ಸಂಘಟನೆ ಕಾರ್ಯಕರ್ತರು ಜಂಟಿಯಾಗಿ ಆಗ್ರಹಿಸಿದರು.