ಪರಿಸರ ನಿಯಮಾವಳಿ ಉಲ್ಲಂಘನೆ ಆರೋಪ: ಶಾಸಕ ಯತ್ನಾಳ್ ಒಡೆತನದ ಸಕ್ಕರೆ ಕಾರ್ಖಾನೆ ತಕ್ಷಣದಿಂದಲೇ ಮುಚ್ಚುವಂತೆ ಆದೇಶ

Update: 2024-01-27 05:44 GMT

ಕಲಬುರಗಿ: ವಿಷಾನಿಲ ಸೋರಿಕೆಯಿಂದ ಇಬ್ಬರು ಕಾರ್ಮಿಕರ ಸಾವಿಗೆ ಕಾರಣವಾದ ಹಮ್ನಾಬಾದ್ ನ ಪ್ರಸನ್ನ ಪ್ರಿ ಪ್ರೊಸೆಸಿಂಗ್ ಪ್ರೈವೇಟ್ ಲಿಮಿಟೆಡ್ ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒಡೆತನದ ಚಿಂಚೋಳಿಯ ಸಿದ್ಧಶ್ರೀ ಸೌಹಾರ್ದ ಸಹಕಾರಿ ಸಕ್ಕರೆ ಕಾರ್ಖಾನೆಗಳನ್ನು ತಕ್ಷಣದಿಂದಲೇ ಮುಚ್ಚುವಂತೆ  ಕೆಎಸ್​ಪಿಸಿಬಿ ಸಂಬಂಧಪಟ್ಟ ಅಧಿಕಾರಿಗಳಿಗೆ  ಆದೇಶಿಸಿದೆ.

ಕಳೆದ ವಾರ ಪರಿಸರ ಮತ್ತು ಅರಣ್ಯ ಸಚಿವ ಈಶ್ವರ ಖಂಡ್ರೆ ಕೆಎಸ್ ಪಿಸಿಬಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ ಬೆನ್ನಲ್ಲೇ ತುರ್ತು ಸಭೆ ನಡೆಸಿದ ಮಂಡಳಿ ಈ ಆದೇಶ ಹೊರಡಿಸಿದೆ.

ಎರಡೂ ಸಂಸ್ಥೆಗಳು ವಾಯು, ಜಲ ಕಾಯಿದೆಗಳನ್ನು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಅವುಗಳಿಗೆ ನೀಡಿರುವ ವಿದ್ಯುತ್, ನೀರಿನ ಸಂಪರ್ಕಗಳನ್ನು ತಕ್ಷಣದಿಂದಲೇ ಸ್ಥಗಿತಗೊಳಿಸುವಂತೆ ನಿರ್ದೇಶನ ನೀಡಲಾಗಿದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಶಾಂತ್ ಎ. ತಿಮ್ಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಯಾವ್ಯಾವ ನಿಯಮಗಳನ್ನು ಉಲ್ಲಂಘನೆ ಮಾಡಿ ಕಾರ್ಖಾನೆಗಳನ್ನು ನಡೆಸಲಾಗುತ್ತಿದೆ ಎಂಬ ಕುರಿತು ಸ್ಥಳೀಯ ಪರಿಸರ ಅಧಿಕಾರಿಗಳು ನೀಡಿದ ಮಾಹಿತಿ ಆಧರಿಸಿ, ಈ ಎರಡೂ ಪ್ರಮುಖ ತೀರ್ಮಾನ ಕೈಗೊಳ್ಳಲಾಗಿದೆ.

ಜನವರಿ 21ರಂದು ವಿಷಾನಿಲ ಸೋರಿಕೆಯಿಂದ ಇಬ್ಬರು ಕಾರ್ಮಿಕರು ಮೃತಪಟ್ಟ ಹಿನ್ನೆಲೆಯಲ್ಲಿ ನಿಯಮಗಳನ್ನು ಉಲ್ಲಂಘಿಸುತ್ತಿರುವ ಹುಮ್ನಾಬಾದ್ ತಾಲೂಕಿನ ಗಡ್ವಂತಿ ಗ್ರಾಮದ ಕೆಐಎಡಿಬಿ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೆಸರ್ಸ್ ಪ್ರಸನ್ನ ಪ್ರಿ ಪ್ರೊಸೆಸಿಂಗ್ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಯನ್ನು ಮುಂದಿನ ಆದೇಶವರೆಗೆ ಸ್ಥಗಿತಕ್ಕೆ ಸೂಚನೆ ನೀಡಲಾಗಿದೆ.

ಕಾರ್ಖಾನೆ ಯಾವುದೇ ಕೈಗಾರಿಕೆಗಳಿಂದ ಉತ್ಪಾದನೆಯಾಗುವ ಹಾನಿಕಾರಕ ತ್ಯಾಜ್ಯ ಪಡೆಯಬಾರದು, ಸಂಸ್ಕರಣೆ ಮಾಡಬಾರದು. ಹಾಲಿ ಕಾರ್ಖಾನೆಯಲ್ಲಿ ಸಂಗ್ರಹವಾಗಿರುವ ತ್ಯಾಜ್ಯವನ್ನು ನಿಯಮದ ಪ್ರಕಾರ 7 ದಿನಗಳಲ್ಲಿ ವಿಲೇವಾರಿ ಮಾಡಬೇಕು. ಜೆಸ್ಕಾಂ ವಿದ್ಯುತ್ ಸಂಪರ್ಕ ಕಡಿತಗೊಳಿಸಬೇಕು ಮತ್ತು ಬೀದರ್ ಜಿಲ್ಲಾಧಿಕಾರಿ ತಕ್ಷಣವೇ ಕಾರ್ಖಾನೆಯನ್ನು ಸೀಝ್ ಮಾಡಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.

ಈ ಮಧ್ಯೆ, ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ 2023ರಿಂದ ಈವರೆಗೆ ರಾಜ್ಯದಲ್ಲಿ ಎಷ್ಟು ಕೈಗಾರಿಕೆಗಳು, ಕಲ್ಲು ಮತ್ತು ಅದಿರು ಗಣಿಗಳಿಗೆ ನೋಟಿಸ್ ನೀಡಲಾಗಿದೆ. ಅವುಗಳಲ್ಲಿ ಎಷ್ಟು ನೋಟಿಸ್ ಗೆ ಉತ್ತರ ನೀಡಿವೆ. ಎಷ್ಟು ಕಾರ್ಖಾನೆಗಳು ಮತ್ತು ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ಒಂದು ವಾರದಲ್ಲಿ ಸಮಗ್ರ ವರದಿ ಸಲ್ಲಿಸುವಂತೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚನೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News