ನೀರು ಪೂರೈಕೆಗೂ ಯೋಗ್ಯತೆ ಇಲ್ಲದ ಸರಕಾರ : ಆರ್. ಅಶೋಕ್ ಟೀಕೆ

Update: 2024-06-20 12:16 GMT

ಕಲಬುರಗಿ: ಸರಕಾರಿ ಆಸ್ಪತ್ರೆಗಳಲ್ಲಿ ಜೀವ ಉಳಿಸುವ ಕಾರಣಕ್ಕಾಗಿ ಕೈಗೊಳ್ಳುವ ಶಸ್ತ್ರಚಿಕಿತ್ಸೆಗೂ ನೀರು ಪೂರೈಸಲಾಗದಷ್ಟು ರಾಜ್ಯ ಸರಕಾರ ಯೋಗ್ಯತೆ ಕಳೆದುಕೊಂಡಿದೆ ಎಂದು ಪ್ರತಿಪಕ್ಷದ ನಾಯಕ ಉಪಮುಖ್ಯಮಂತ್ರಿ ಆರ್.ಅಶೋಕ್ ಟೀಕಿಸಿದರು.

ಕಲಬುರಗಿಯ ಜಿಮ್ಸ್ ಮತ್ತು ಜಯದೇವ ಆಸ್ಪತ್ರೆಗೆ ಗುರುವಾರ ಭೇಟಿ ಕೊಟ್ಟ ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, "ಕಲಬುರಗಿಯ ಜಯದೇವ ಹೃದ್ರೋಗ ಚಿಕಿತ್ಸಾ ಆಸ್ಪತ್ರೆಯಲ್ಲಿ ಇದೇ ಜೂನ್ 16, 17, 18ರಂದು ಸಮರ್ಪಕವಾಗಿ ನೀರು ಪೂರೈಕೆಯಾಗದ ಕಾರಣಕ್ಕಾಗಿ ತುರ್ತು ಹೃದಯ ಶಸ್ತ್ರಚಿಕಿತ್ಸೆಗಳನ್ನು ಸಹ ಕೈಗೊಳ್ಳಲಾಗಿಲ್ಲ. ಹೃದಯದ ಸಮಸ್ಯೆ ಕಂಡುಬಂದಾಗ ಚಿಕಿತ್ಸೆಯ ದೃಷ್ಟಿಯಿಂದ ಪ್ರತಿ ಕ್ಷಣವೂ ಮುಖ್ಯ ಎನಿಸಿಕೊಳ್ಳುತ್ತದೆ. ಹೀಗಿರುವಾಗ ಈ ಮೂರು ದಿನಗಳ ಕಾಲ ತುರ್ತು ಹೃದಯ ಶಸ್ತ್ರಚಿಕಿತ್ಸೆ ಕೈಗೊಳ್ಳದೆ, ಜನರ ಜೀವಗಳೊಂದಿಗೆ ಚೆಲ್ಲಾಟ ಆಡಲಾಗಿದೆ. ಆ ಮೂಲಕ ರಾಜ್ಯ ಸರಕಾರ ತನ್ನ ವೈಫಲ್ಯ ಎತ್ತಿ ತೋರಿಸಿದೆ" ಎಂದು ವಾಗ್ದಾಳಿ ನಡೆಸಿದರು.

ʼಇಡೀ ದೇಶದಲ್ಲಿ ಅತ್ಯಂತ ಮುಂದುವರಿದ ರಾಜ್ಯ ಎಂಬ ಹೆಸರು ಕರ್ನಾಟಕ ರಾಜ್ಯಕ್ಕಿದೆ. ಅದರಲ್ಲೂ ದೇಶ-ವಿದೇಶಗಳಿಂದ ನಮ್ಮ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಜನರು ಬರುತ್ತಾರೆ. ಹೀಗಿರುವಾಗ ಆಸ್ಪತ್ರೆಗೆ ನೀರು ಒದಗಿಸಲು ಸಹ ದುಡ್ಡು ಇಲ್ಲದಷ್ಟು ರಾಜ್ಯ ಸರಕಾರ ಪಾಪರ್ ಆಗಿದೆʼ ಎಂದು ವ್ಯಂಗ್ಯವಾಡಿದರು.

ʼಮುಖ್ಯಮಂತ್ರಿಗಳ ಮನೆಯಲ್ಲಿ ಕೆಂಪು ನೀರು ಬಂದ ಕಾರಣಕ್ಕಾಗಿ ಎಷ್ಟು ಅಧಿಕಾರಿಗಳು ಸಸ್ಪೆಂಡ್ ಆಗಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಹೀಗಿರುವಾಗ ಕಲಬುರಗಿಯ ಜಿಮ್ಸ್ ಮತ್ತು ಜಯದೇವ ಆಸ್ಪತ್ರೆಗೆ ಎದುರಾದ ನೀರಿನ ಸಮಸ್ಯೆ ಕುರಿತಂತೆ ಎಷ್ಟು ಮಂದಿ ಸಸ್ಪೆಂಡ್ ಆಗಿದ್ದಾರೆ?ʼ ಎಂದು ಅಶೋಕ್ ಪ್ರಶ್ನಿಸಿದರು.

ಕಲಬುರಗಿಯ ಜಿಮ್ಸ್ ಮತ್ತು ಜಯದೇವ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕಾದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಬೆಂಗಳೂರಿನ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ನಿರ್ಲಕ್ಷ್ಯದ ಕುರಿತು ಸರಕಾರ ಮತ್ತು ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಕ್ರಮಕ್ಕೆ ಒತ್ತಾಯಿಸುವುದಲ್ಲದೆ, ಎಲ್ಲರನ್ನೂ ವಿಧಾನಸೌಧದ ಕಟಕಟೆಯಲ್ಲಿ ನಿಲ್ಲಿಸುವುದಾಗಿ ಎಚ್ಚರಿಕೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಶಶಿಲ್ ನಮೋಶಿ, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಿ, ಮಾಜಿ ಸಚಿವ ಬಾಬುರಾವ್ ಚವ್ಹಾಣ, ಬಿಜೆಪಿ ನಾಯಕರಾದ ಶರಣಪ್ಪ ತಳವಾರ್, ಅವ್ವಣ್ಣ ಮ್ಯಾಕೇರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News