ಉಡುಪಿ ಜಿಲ್ಲೆಯಲ್ಲಿ 19 ಬ್ಲ್ಯಾಕ್ ಸ್ಪಾಟ್‌ಗಳ ಗುರುತು: ಎಸ್ಪಿ ಅಕ್ಷಯ್
ಉಡುಪಿ, ಜೂ.24: ಉಡುಪಿ ಜಿಲ್ಲೆಯಾದ್ಯಂತ ಹೆಚ್ಚು ಅಪಘಾತಗಳು ಸಂಭವಿಸುವ ಒಟ್ಟು 19 ಬ್ಲ್ಯಾಕ್ ಸ್ಪಾಟ್‌ಗಳನ್ನು ಗುರುತಿಸಲಾಗಿದ್ದು, ಈ ಸ್ಥಳ ಗಳಲ್ಲಿ ಅಪಘಾತಗಳ ಸಂಖ್ಯೆ ಇಳಿಕೆ ಮಾಡುವ ನಿಟ್ಟಿನಲ್ಲಿ ತಕ್ಷಣದ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಹಾಕೇ ಮಚ್ಚೀಂದ್ರ ತಿಳಿಸಿದ್ದಾರೆ.
ಉಡುಪಿ ಎಸ್ಪಿ ಕಚೇರಿಯಲ್ಲಿಂದು ಜಿಲ್ಲೆಯಲ್ಲಿ ಸಂಭವಿಸುತ್ತಿರುವ ಅಪಘಾತ ಗಳ ಅಂಕಿಅಂಶಗಳ ಬಗ್ಗೆ ಮಾಹಿತಿ ನೀಡಿದ ಅವರು, ಪೊಲೀಸ್ ಇಲಾಖೆ, ರಸ್ತೆ ಏಜೆನ್ಸಿ ಹಾಗೂ ಆರ್‌ಟಿಓ ಜಂಟಿಯಾಗಿ ಅಪಘಾತ ಹೆಚ್ಚು ಸಂಭವಿಸುವ ಸ್ಥಳಗಳನ್ನು ಪರಿಶೀಲನೆ ಮಾಡಿ ವೈಜ್ಞಾನಿಕ ತನಿಖಾ ವರದಿಯನ್ನು ಸಿದ್ಧಪಡಿಸ ಲಾಗಿದೆ. ಇದರಲ್ಲಿ ವಾಹನಗಳ ಮೆಕ್ಯಾನಿಕಲ್ ತಪ್ಪು, ರಸ್ತೆ ನಿರ್ಮಿಸಿದ ಇಂಜಿನಿಯರ್ ತಪ್ಪು ಮತ್ತು ಚಾಲಕನ ತಪ್ಪುಗಳ ಬಗ್ಗೆ ವೈಜ್ಞಾನಿಕವಾಗಿ ತನಿಖೆ ನಡೆಸಲಾಗುತ್ತದೆ ಎಂದರು.
ಈ ವರದಿಯನ್ನು ಜಿಲ್ಲಾ ಹಾಗೂ ರಾಜ್ಯದ ರಸ್ತೆ ಸುರಕ್ಷತಾ ಪ್ರಾಧಿಕಾರಕ್ಕೆ ಸಲ್ಲಿಸಲಾಗುವುದು. ಅಲ್ಲಿನ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಿ ಕ್ರಮ ತೆಗೆದುಕೊಳ್ಳಲಾಗುತ್ತದೆ. ಬ್ಲ್ಯಾಕ್ ಸ್ಪಾಟ್‌ಗಳಲ್ಲಿ ಅಗತ್ಯ ಇರುವ ಶಾಶ್ವತ ಪರಿಹಾರ (ಸರ್ವಿಸ್ ರಸ್ತೆ, ತಿರುವು ಕಡಿಮೆ ಮಾಡುವುದು) ಮತ್ತು ತಾತ್ಕಾಲಿಕ ಪರಿಹಾರ (ಬ್ಯಾರಿಕೇಡ್ ಅಳವಡಿಕೆ, ಹಮ್ಸ್, ದೀಪ ಅಳವಡಿಕೆ)ಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು.
6 ತಿಂಗಳಲ್ಲಿ 120 ಮೃತ್ಯು!
2021ರಲ್ಲಿ 1010 ಅಪಘಾತಗಳಲ್ಲಿ 189 ಮಂದಿ ಮೃತಪಟ್ಟು, 1167 ಮಂದಿ ಗಾಯಗೊಂಡಿದ್ದಾರೆ. 2022ರಲ್ಲಿ 1232 ಅಪಘಾತ ಪ್ರಕರಣಗಳಲ್ಲಿ ಒಟ್ಟು 234 ಮಂದಿ ಮೃತಪಟ್ಟಿದ್ದು, 1486 ಮಂದಿ ಗಾಯಗೊಂಡಿದ್ದಾರೆ. 2023ರ ಜೂನ್ ತಿಂಗಳವರೆಗೆ 566 ಅಪಘಾತಗಳಲ್ಲಿ 120 ಮಂದಿ ಮೃತ ಪಟ್ಟು, 763 ಮಂದಿ ಗಾಯಗೊಂಡಿದ್ದಾರೆ.
2021ರಲ್ಲಿ ಸಂಭವಿಸಿದ ಅಪಘಾತದಲ್ಲಿ 18-25ವರ್ಷದೊಳಗಿನ 31 ಮಂದಿ ಮೃತ್ಯು -210 ಮಂದಿ ಗಾಯ, 25-35ವರ್ಷದೊಳಗಿನ 68 ಮಂದಿ ಮೃತ್ಯು -265 ಮಂದಿ ಗಾಯ, 35-45ವರ್ಷದೊಳಗಿನ 40 ಮಂದಿ ಮೃತ್ಯು- 266 ಗಾಯಗೊಂಡಿದ್ದಾರೆ. 2022ರಲ್ಲಿ 18-25ವರ್ಷದೊಳಗಿನ 22 ಮಂದಿ ಮೃತ್ಯು -238 ಮಂದಿ ಗಾಯ, 25-35ವರ್ಷದೊಳಗಿನ 58 ಮಂದಿ ಮೃತ್ಯು -304 ಮಂದಿ ಗಾಯ, 35-45ವರ್ಷದೊಳಗಿನ 52 ಮಂದಿ ಮೃತ್ಯು- 208 ಮಂದಿ ಗಾಯಗೊಂಡಿದ್ದಾರೆ.
ಅತೀವೇಗವೇ ಹೆಚ್ಚು ಕಾರಣ
2021ರಲ್ಲಿ ಸಂಭವಿಸಿದ 1010 ಅಪಘಾತದಲ್ಲಿ ಅತೀವೇಗದಿಂದ 866 ಅಪಘಾತಗಳು ನಡೆದು 183 ಮಂದಿ ಮೃತಪಟ್ಟರೆ, ವಿರುದ್ಧ ದಿಕ್ಕಿನಲ್ಲಿ ವಾಹನ ಚಲಾಯಿಸಿ 14 ಅಪಘಾತಗಳು ನಡೆದಿದೆ. ಆದರೆ ಇದರಲ್ಲಿ ಯಾವುದೇ ಸಾವು ಸಂಭವಿಸಿಲ್ಲ. 2022ರಲ್ಲಿ 1232 ಅಪಘಾತಗಳಲ್ಲಿ 1098 ಅಪಘಾತಗಳು ಅತೀವೇಗದಿಂದ ಸಂಭವಿಸಿ, 227 ಮಂದಿ ಮೃತಪಟ್ಟಿದ್ದಾರೆ. ವಿರುದ್ಧ ದಿಕ್ಕಿನಲ್ಲಿ ವಾಹನ ಚಲಾಯಿಸಿದ ಪರಿಣಾಮ 35 ಅಪಘಾತಗಳು ಸಂಭವಿಸಿ ಮೂರು ಮಂದಿ ಮೃತಪಟ್ಟಿದ್ದಾರೆ.
2021ರಲ್ಲಿ ಸಂಭವಿಸಿದ ಒಟ್ಟು ಅಪಘಾತಗಳಲ್ಲಿ 512 ಪ್ರಕರಣಗಳಲ್ಲಿ ದ್ವಿಚಕ್ರ ವಾಹನಗಳು ಅಪಘಾತಕ್ಕೀಡಾಗಿ 87 ಮಂದಿ ಸವಾರರು ಮೃತಪಟ್ಟಿದ್ದರು ಮತ್ತು 177 ಪಾದಚಾರಿ ಅಪಘಾತಕ್ಕೀಡಾಗಿ 49 ಮಂದಿ ಮೃತಪಟ್ಟಿದ್ದರು. 2022ರಲ್ಲಿ ಸಂಭವಿಸಿದ ಒಟ್ಟು ಅಪಘಾತಗಳ ಪೈಕಿ 587 ಪ್ರಕರಣಗಳಲ್ಲಿ ದ್ವಿಚಕ್ರ ವಾಹನಗಳು ಅಪಘಾತಕ್ಕೀಡಾಗಿ 110 ಮಂದಿ ಮೃತಪಟ್ಟಿದ್ದರು ಮತ್ತು 199 ಪಾದಚಾರಿ ಅಪಘಾತಕ್ಕೀಡಾಗಿ 69 ಮಂದಿ ಮೃತಪಟ್ಟಿದ್ದಾರೆ.
2021ರಲ್ಲಿ ಸಂಭವಿಸಿದ ದ್ವಿಚಕ್ರ ವಾಹನ ಅಪಘಾತಗಳಲ್ಲಿ ಹೆಲ್ಮೆಟ್ ಧರಿಸದ ಪರಿಣಾಮ 26 ಮಂದಿ ಸವಾರರು ಮೃತಪಟ್ಟು, 83 ಮಂದಿ ಗಾಯ ಗೊಂಡಿದ್ದರು. 2022ರಲ್ಲಿ 37 ಮಂದಿ ಮೃತಪಟ್ಟ 145 ಗಾಯಗೊಂಡಿದ್ದಾರೆ ಎಂದು ಎಸ್ಪಿ ಅಕ್ಷಯ್ ಹಾಕೇ ಮಚ್ಚೀಂದ್ರ ಮಾಹಿತಿ ನೀಡಿದ್ದಾರೆ.
ಶಾಲಾ ಸೆಕ್ಯುರಿಟಿಗಳಿಗೆ ಟ್ರಾಫಿಕ್ ತರಬೇತಿ
ಉಡುಪಿ ಜಿಲ್ಲೆಯಾದ್ಯಂತ ಹೆಚ್ಚು ವಾಹನ ಸಂಚಾರ ಇರುವ ರಸ್ತೆ ಬದಿಯ ಶಾಲಾ ಕಾಲೇಜುಗಳ ಸೆಕ್ಯುರಿಟಿ ಗಾರ್ಡ್ ಅಥವಾ ಸಿಬ್ಬಂದಿಗೆ ಮಕ್ಕಳನ್ನು ರಸ್ತೆ ದಾಟಿಸುವ ಸೇರಿದಂತೆ ಮೂಲಭೂತ ಟ್ರಾಫಿಕ್ ವ್ಯವಸ್ಥೆಯ ಕುರಿತು ತರಬೇತಿ ಕಾರ್ಯಾಗಾರವನ್ನು ಜೂ.26ರಿಂದ ಹಮ್ಮಿಕೊಳ್ಳಲಾಗುವುದು ಎಂದು ಎಸ್ಪಿ ಅಕ್ಷಯ್ ಹಾಕೇ ಮಚ್ಚೀಂದ್ರ ತಿಳಿಸಿದರು.
ಹೆಬ್ರಿ -ಆಗುಂಬೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತ್ತಿರುವುದರಿಂದ ಪೊಲೀಸ್, ಆರ್‌ಟಿಓ ಹಾಗೂ ರೋಡ್ ಏಜೆನ್ಸಿಗಳು ಸ್ಥಳಕ್ಕೆ ತೆರಳಿ ತಪ್ಪುಗಳನ್ನು ಸರಿಪಡಿಸುವ ಪ್ರಯತ್ನ ಮಾಡಲಾಗುವುದು. ಈ ರಸ್ತೆಯಲ್ಲಿ ತಿರುವು ಜಾಸ್ತಿ ಇರುವುದರಿಂದ ಬ್ಯಾರಿಕೇಡ್ ಹಾಕಲು ಆಗುವುದಿಲ್ಲ. ಅದಕ್ಕಾಗಿ ಈ ವರ್ಷ ರಸ್ತೆ ಅಪಘಾತಗಳಲ್ಲಿ ಮೃತಪಟ್ಟವರ ಸಂಖ್ಯೆಯನ್ನು ಒಳಗೊಂಡ ಫಲಕಗಳನ್ನು ಸೋಮೇಶ್ವರ ಮತ್ತು ಹೆಬ್ರಿಯಲ್ಲಿ ಹಾಕಲಾಗುವುದು ಎಂದರು.
‘ಕಟಪಾಡಿ ಜಂಕ್ಷನ್‌ನಲ್ಲಿ ಹಲವು ರೀತಿಯ ಕ್ರಮಗಳನ್ನು ತೆಗೆದುಕೊಂಡ ಬಳಿಕ ಕಳೆದ ಐದು ತಿಂಗಳಲ್ಲಿ ಶೂನ್ಯ ಅಪಘಾತಗಳು ವರದಿಯಾಗಿವೆ. ಅದೇ ರೀತಿ ಕೋಟ ಜಂಕ್ಷನ್‌ನಲ್ಲಿಯೂ ಕಳೆದ ಮೂರು ತಿಂಗಳಲ್ಲಿ ಶೂನ್ಯ ಅಪಘಾತಗಳು ವರದಿಯಾಗಿವೆ’
- ಅಕ್ಷಯ್ ಹಾಕೇ ಮಚ್ಚೀಂದ್ರ, ಎಸ್ಪಿ, ಉಡುಪಿ
19 ಬ್ಲ್ಯಾಕ್ ಸ್ಪಾಟ್‌ಗಳ ವಿವರ ಇಲ್ಲಿದೆ
ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಉಚ್ಚಿಲ, ಕಾಪು ಠಾಣಾ ವ್ಯಾಪ್ತಿಯ ಮೂಳೂರು, ಕಾಪು ವಿದ್ಯಾನಿಕೇತನ ಜಂಕ್ಷನ್, ಪಾಂಗಾಳ, ಉಡುಪಿ ಸಂಚಾರ ಠಾಣಾ ವ್ಯಾಪ್ತಿಯ ಅಂಬಲಪಾಡಿ ಜಂಕ್ಷನ್, ನಿಟ್ಟೂರು ಜಂಕ್ಷನ್, ಅಂಬಾಗಿಲು ಜಂಕ್ಷನ್, ಆಶೀರ್ವಾದ್, ಸಂತೆಕಟ್ಟೆ ಜಂಕ್ಷನ್, ಬ್ರಹ್ಮಾವರ ಠಾಣಾ ವ್ಯಾಪ್ತಿಯ ಮಹೇಶ್ ಆಸ್ಪತ್ರೆ ಜಂಕ್ಷನ್, ಭರಣಿ ಪೆಟ್ರೋಲ್ ಬಂಕ್, ಕುಮ್ರಗೋಡು ಕ್ರಾಸ್, ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ತೆಕ್ಕಟ್ಟೆ ಜಂಕ್ಷನ್, ಕುಂದಾಪುರ ಸಂಚಾರ ಠಾಣಾ ವ್ಯಾಪ್ತಿಯ ಕುಂಬಾಶಿ ಸ್ವಾಗತ ಗೋಪುರ, ತಲ್ಲೂರು ಜಂಕ್ಷನ್, ಬೈಂದೂರು ಠಾಣಾ ವ್ಯಾಪ್ತಿಯ ಯಡ್ತರೆ ಜಂಕ್ಷನ್, ನಿರ್ಗದ್ದೆ ಶಿರೂರು, ಒತ್ತಿನೆಣೆ, ಕಾರ್ಕಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಅಬ್ಬಾಸ್ ಕಟ್ಟಿಂಗ್ ಮಾಳ ಘಾಟ್.