ಪ್ರಧಾನಿ ವಿರುದ್ಧ ನಿಂದನೀಯ ಪದಗಳು ಅವಹೇಳನಕಾರಿ, ಆದರೆ ದೇಶದ್ರೋಹವಲ್ಲ: ಕರ್ನಾಟಕ ಹೈಕೋರ್ಟ್

Update: 2023-07-08 10:50 GMT

Karnataka high court.|  Photo: PTI

ಬೆಂಗಳೂರು: ಪ್ರಧಾನಿಯ ವಿರುದ್ಧ ಬಳಸಲಾಗಿದ್ದ ನಿಂದನಾತ್ಮಕ ಪದಗಳು ಅವಹೇಳನಕಾರಿಯಾಗಿದ್ದವು ಮತ್ತು ಬೇಜವಾಬ್ದಾರಿಯಿಂದ ಕೂಡಿದ್ದವು, ಆದರೆ ಇದನ್ನು ದೇಶದ್ರೋಹ ಎನ್ನಲಾಗದು ಎಂದು ಹೇಳಿರುವ ಕರ್ನಾಟಕ ಉಚ್ಚ ನ್ಯಾಯಾಲಯವು,ಈ ಸಂಬಂಧ ಬೀದರ್ ನ ಶಾಹಿನ್ ಶಾಲಾಡಳಿತದ ವಿರುದ್ಧ ದಾಖಲಾಗಿದ್ದ ದೇಶದ್ರೋಹ ಪ್ರಕರಣವನ್ನು ರದ್ದುಗೊಳಿಸಿದೆ.

ಉಚ್ಚ ನ್ಯಾಯಾಲಯದ ಕಲಬುರಗಿ ಪೀಠದ ನ್ಯಾ.ಹೇಮಂತ ಚಂದನಗೌಡರ್ ಅವರು ಬೀದರ್ ನ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್ಐಆರ್ ಅನ್ನು ರದ್ದುಗೊಳಿಸಿದ್ದಾರೆ. ಶಾಹಿನ್ ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಅಲ್ಲಾವುದ್ದೀನ್,ಅಬ್ದುಲ್ ಖಲೇಕ್, ಮುಹಮ್ಮದ್ ಬಿಲಾಲ್ ಇನಾಮ್ದಾರ್ ಮತ್ತು ಮುಹಮ್ಮದ್ ಮೆಹತಾಬ್ ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿತ್ತು.

ಐಪಿಸಿಯ ಕಲಂ 153(ಎ)ರಲ್ಲಿ ಹೇಳಿರುವಂತೆ ಧಾರ್ಮಿಕ ಗುಂಪುಗಳ ನಡುವೆ ಸಾಮರಸ್ಯಕ್ಕೆ ಧಕ್ಕೆಯನ್ನುಂಟು ಮಾಡುವ ಯಾವುದೇ ಅಂಶಗಳು ಈ ಪ್ರಕರಣದಲ್ಲ ಕಂಡುಬಂದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಸರಕಾರದ ನೀತಿಗಳ ರಚನಾತ್ಮಕ ಟೀಕೆಗೆ ಅವಕಾಶವಿದೆ, ಆದರೆ ಕೆಲವು ಜನರು ಆಕ್ಷೇಪಣೆಯನ್ನು ಹೊಂದಿರಬಹುದಾದ ನೀತಿ ನಿರ್ಧಾರವನ್ನು ಕೈಗೊಂಡಿದ್ದಕ್ಕೆ ಸಾಂವಿಧಾನಿಕ ಹುದ್ದೆಗಳಲ್ಲಿರುವವರನ್ನು ಅವಮಾನಿಸುವಂತಿಲ್ಲ ಎಂದು ನ್ಯಾ.ಚಂದನಗೌಡರ್ ತನ್ನ ತೀರ್ಪಿನಲ್ಲಿ ಹೇಳಿದ್ದಾರೆ. ನಾಟಕವನ್ನು ಶಾಲೆಯ ಆವರಣದಲ್ಲಿ ಪ್ರದರ್ಶಿಸಲಾಗಿತ್ತು ಮತ್ತು ಹಿಂಸೆಗಿಳಿಯುವಂತೆ ಜನರನ್ನು ಪ್ರಚೋದಿಸುವ ಅಥವಾ ಸಾರ್ವಜನಿಕ ಶಾಂತಿ ಭಂಗವನ್ನುಂಟು ಮಾಡುವ ಯಾವುದೇ ಪದಗಳನ್ನು ಮಕ್ಕಳು ಹೇಳಿರಲಿಲ್ಲ ಎಂದು ಬೆಟ್ಟು ಮಾಡಿದೆ.

ಆರೋಪಿಗಳ ಪೈಕಿ ಓರ್ವರು ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ನಾಟಕದ ವೀಡಿಯೊವನ್ನು ಅಪ್ಲೋಡ್ ಮಾಡಿವ ಬಳಿಕವಷ್ಟೇ ಅದು ಸಾರ್ವಜನಿಕರ ಗಮನಕ್ಕೆ ಬಂದಿತ್ತು ಹೇಳಿರುವ ಉಚ್ಚ ನ್ಯಾಯಾಲಯವು,ಹೀಗಾಗಿ ಅರ್ಜಿದಾರರು ಹಿಂಸಾಚಾರಕ್ಕಿಳಿಯುವಂತೆ ಜನರನ್ನು ಪ್ರಚೋದಿಸುವ ಅಥವಾ ಸಾರ್ವಜನಿಕ ಅವ್ಯವಸ್ಥೆಯನ್ನು ಸೃಷ್ಟಿಸುವ ಉದ್ದೇಶದಿಂದ ನಾಟಕವನ್ನು ಪ್ರದರ್ಶಿಸಿದ್ದರು ಎನ್ನುವುದನ್ನು ಊಹಿಸಲೂ ಸಾಧ್ಯವಿಲ್ಲ. ಆದ್ದರಿಂದ ಅಗತ್ಯ ಅಂಶಗಳ ಅನುಪಸ್ಥಿತಿಯಲ್ಲಿ ಕಲಂ 124ಎ (ದೇಶದ್ರೋಹ) ಮತ್ತು ಕಲಂ 505(2) ಅಡಿ ಅಪರಾಧಕ್ಕಾಗಿ ಎಫ್ಐಆರ್ ನೋಂದಣಿಯನ್ನು ಅನುಮತಿಸಲಾಗುವುದಿಲ್ಲ ಎಂದು ಹೇಳಿದೆ.

2020, ಜ.21ರಂದು 4,5 ಮತ್ತು 6ನೇ ತರಗತಿ ವಿದ್ಯಾರ್ಥಿಗಳಿಂದ ಸಿಎಎ ಮತ್ತು ಎನ್ಸಿಆರ್ ವಿರುದ್ಧ ನಾಟಕವನ್ನು ಪ್ರದರ್ಶಿಸಿದ್ದಕ್ಕಾಗಿ ಎಬಿವಿಪಿ ಕಾರ್ಯಕರ್ತ ಸಲ್ಲಿಸಿದ್ದ ದೂರಿನ ಮೇರೆಗೆ ಶಾಲೆಯ ಅಧಿಕಾರಿಗಳ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿತ್ತು. ಉಚ್ಚ ನ್ಯಾಯಾಲಯವು ತನ್ನ ತೀರ್ಪಿನಲ್ಲಿ, ಸರಕಾರಗಳನ್ನು ಟೀಕಿಸುವುದರಿಂದ ಮಕ್ಕಳನ್ನು ದೂರವಿರಿಸುವಂತೆ ಶಾಲೆಗಳಿಗೆ ಕಿವಿಮಾತನ್ನೂ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News