ಅವಮಾನಕಾರಿ ಹೇಳಿಕೆ: ಮಣಿಪುರ ರಾಜಕಾರಣಿಗೆ ಅಸ್ಸಾಂ ರೈಫಲ್ಸ್‌ನಿಂದ ಕಾನೂನು ನೋಟಿಸ್
ಇಂಫಾಲ: ಮಣಿಪುರದಲ್ಲಿಯ ಅಸ್ಸಾಂ ರೈಫಲ್ಸ್ ತನ್ನ ಕುರಿತು ಅವಮಾನಕಾರಿ ಹೇಳಿಕೆಗಾಗಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಠಾವಳೆ)ದ ರಾಷ್ಟ್ರೀಯ ಕಾರ್ಯದರ್ಶಿ ಮಹೇಶ್ವರ ಥೌನಾಓಜಮ್ ಅವರಿಗೆ ಕಾನೂನು ನೋಟಿಸನ್ನು ನೀಡಿದೆ.
ಜೂ.30ರಂದು ದಿಲ್ಲಿಯಲ್ಲಿ ನಡೆದಿದ್ದ ಮೈತೆಯಿ ಹುತಾತ್ಮರಿಗೆ ಸಂತಾಪ ಸೂಚನೆ ಸಭೆಯಲ್ಲಿ ನೀಡಿದ್ದ ಹೇಳಿಕೆಗಾಗಿ ಲಿಖಿತವಾಗಿ ಮತ್ತು ಸಾರ್ವಜನಿಕವಾಗಿ ಕ್ಷಮೆ ಕೋರುವಂತೆ ಅಸ್ಸಾಂ ರೈಫಲ್ಸ್ ಮಾನನಷ್ಟ ನೋಟಿಸ್‌ನಲ್ಲಿ ಥೌನಾಓಜಮ್ ಅವರಿಗೆ ಸೂಚಿಸಿದೆ.
ಮೈತೆಯಿ ಸಮುದಾಯಕ್ಕೆ ಸೇರಿದ ಥೌನಾಓಜಮ್ ಅಸ್ಸಾಂ ರೈಫಲ್ಸ್ ಕುಕಿ ಉಗ್ರರಿಗೆ ನೆರವಾಗುತ್ತಿದೆ ಎಂದು ಆರೋಪಿಸಿದ್ದರು. ಅಸ್ಸಾಂ ರೈಫಲ್ಸ್‌ನ್ನು ತಕ್ಷಣ ಮಣಿಪುರದಿಂದ ಹಿಂದೆಗೆದುಕೊಳ್ಳಬೇಕು ಅವರು ಹೇಳಿದ್ದರು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದ್ದು, ಮಣಿಪುರ ಹಿಂಸಾಚಾರದಲ್ಲಿ ಅಸ್ಸಾಂ ರೈಫಲ್ಸ್ ಪ್ರಮುಖ ಪಾತ್ರವನ್ನು ವಹಿಸಿದೆಯೇ ಎಂದೂ ಪ್ರಶ್ನಿಸಿದ್ದನ್ನು ಉಲ್ಲೇಖಿಸಲಾಗಿದೆ.
ಥೌನಾಓಜಮ್ ಅವರ ಹೇಳಿಕೆಗಳು ಸಾರ್ವಜನಿಕವಾಗಿ ಪಡೆಯ ಪ್ರತಿಷ್ಠೆಗೆ ಸಾಕಷ್ಟು ಹಾನಿಯನ್ನುಂಟು ಮಾಡಿದೆ. ಪಡೆಯು ದೇಶಕ್ಕೆ ಶ್ರದ್ಧೆಯಿಂದ ಸೇವೆ ಸಲ್ಲಿಸುತ್ತಿದ್ದು, ಮಣಿಪುರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಶಾಂತಿ,ಭದ್ರತೆ ಮತ್ತು ಅಭಿವೃದ್ಧಿಯನ್ನು ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ ಎಂದು ನೋಟಿಸ್‌ನಲ್ಲಿ ತಿಳಿಸಿರುವ ಅಸ್ಸಾಂ ರೈಫಲ್ಸ್, ನೋಟಿಸ್ ಸ್ವೀಕರಿಸಿದ 15 ದಿನಗಳಲ್ಲಿ ಪ್ರಮುಖ ಮಾಧ್ಯಮಗಳ ಮೂಲಕ ಸಾರ್ವಜನಿಕವಾಗಿ ಕ್ಷಮೆಯನ್ನು ಯಾಚಿಸುವಂತೆ ಥೌನಾಓಜಮ್ ಅವರನ್ನು ಆಗ್ರಹಿಸಿದೆ.
ಆದರೆ, ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಥೌನಾಓಜಮ್, ತಾನು ಕ್ಷಮೆಯನ್ನು ಯಾಚಿಸುವುದಿಲ್ಲ ಮತ್ತು ಪ್ರಜಾಪ್ರಭುತ್ವದಲ್ಲಿ ತಾನು ವಾಕ್ ಸ್ವಾತಂತ್ರದ ಹಕ್ಕು ಹೊಂದಿದ್ದೇನೆ ಎಂದು ತಿಳಿಸಿದರು.
‘ನಾನು ಹೇಳಿಕೆಯನ್ನು ನೀಡಿರಲಿಲ್ಲ, ಅದು ನಾನು ಕೇಳಿದ ಪ್ರಶ್ನೆಯಾಗಿತ್ತು. ನಾನು ರಾಜಕಾರಣಿಯಾಗಿ ಮಾತನಾಡಿರಲಿಲ್ಲ, ಓರ್ವ ಮೈತೆಯಿ ಆಗಿ ಮಾತನಾಡಿದ್ದೆ. ಕೆಲವು ಅಸ್ಸಾಂ ರೈಫಲ್ಸ್‌ನ ಕೆಲವು ಅಧಿಕಾರಿಗಳು ಹೇಗೆ ಕುಕಿ ಉಗ್ರರೊಂದಿಗೆ ಸ್ನೇಹದಿಂದಿದ್ದಾರೆ ಎನ್ನುವುದು ಇಲ್ಲಿಯ ಪ್ರತಿಯೊಬ್ಬ ಮೈತೆಯಿಗೂ ಗೊತ್ತಿದೆ,ಇದನ್ನು ಸಾಬೀತುಗೊಳಿಸಲು ವೀಡಿಯೊಗಳಿವೆ. ಇಲ್ಲಿಯ ಎಲ್ಲ ಮೈತೇಯಿ ಜನರಿಗೆ ಗೊತ್ತಿರುವುದನ್ನೇ ನಾನು ಪುನರುಚ್ಚರಿಸಿದ್ದೆ ’ ಎಂದರು.
ರಾಜ್ಯದಲ್ಲಿಯ ಕೆಲವು ಅಸ್ಸಾಂ ರೈಫಲ್ಸ್ ಬಟಾಲಿಯನ್‌ಗಳ ಬದಲಿಗೆ ‘ವಿಶ್ವಾಸಾರ್ಹ ಕೇಂದ್ರ ಪಡೆಗಳು ’ ಮತ್ತು ರಾಜ್ಯ ಪೋಲಿಸರ ತಂಡಗಳನ್ನು ನಿಯೋಜಿಸುವಂತೆ ಈ ತಿಂಗಳ ಪೂರ್ವಾರ್ಧದಲ್ಲಿ ಮಣಿಪುರದ 40 ಶಾಸಕರು ಪ್ರಧಾನಿ ನರೇಂದ್ರ ಮೋದಿಯವರನ್ನು ಆಗ್ರಹಿಸಿದ್ದರು. ಇದಕ್ಕೂ ಮುನ್ನ ಮಣಿಪುರ ಸರಕಾರವು ಮೈತೆಯಿ ಮತ್ತು ಕುಕಿ ಪ್ರಾಬಲ್ಯದ ಪ್ರದೇಶಗಳ ನಡುವಿನ ಬಫರ್ ವಲಯದಲ್ಲಿ ಅಸ್ಸಾಂ ರೈಫಲ್ಸ್ ಸಿಬ್ಬಂದಿಗಳ ಬದಲು ರಾಜ್ಯ ಪೊಲೀಸರು ಮತ್ತು ಸಿಆರ್‌ಪಿಎಫ್ ಸಿಬ್ಬಂದಿಗಳನ್ನು ನಿಯೋಜಿಸಲು ಆದೇಶವನ್ನು ಹೊರಡಿಸಿತ್ತು.