ಕಾಸರಗೋಡು : ಕಾರು ಢಿಕ್ಕಿ; ಗಾಯಾಳು ಬಾಲಕ ಮೃತ್ಯು
ಕಾಸರಗೋಡು : ಕಾರು ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದ್ದ ವಿದ್ಯಾರ್ಥಿಯೋರ್ವ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಘಟನೆ ರವಿವಾರ ನಡೆದಿದೆ.
ಮಂಜೇಶ್ವರ ಉದ್ಯಾವರ ಕೊಳಕೆಗುತ್ತು ನಿವಾಸಿ ರಘುನಾಥ ಆಳ್ವ ಎಂಬವರ ಪುತ್ರ ಸುಮಂತ್ (17) ಮೃತಪಟ್ಟ ವಿದ್ಯಾರ್ಥಿ.
ನಿಟ್ಟೆ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿದ್ದು, ಶನಿವಾರ ಸಂಜೆ ಉದ್ಯಾವರ ಮಾಡ ಸಮೀಪ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಅತೀ ವೇಗದಿಂದ ಬಂದ ಕಾರು ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದನು. ಈತನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಇಂದು ಬೆಳಗ್ಗೆ ಮೃತಪಟ್ಟಿದ್ದಾನೆ.
ಈ ಬಗ್ಗೆ ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನೆಯನ್ನು ಖಂಡಿಸಿ ನಾಗರಿಕರು ರಾಷ್ಟ್ರೀಯ ಹೆದ್ದಾರಿಯ ಉದ್ಯಾವರ ಮಾಡದಲ್ಲಿ ರಸ್ತೆ ತಡೆ ನಡೆಸಿ, ವಿದ್ಯಾರ್ಥಿ ಸುಮಂತ್‌ನ ಮೃತದೇಹವಿಟ್ಟು ಪ್ರತಿಭಟನೆ ನಡೆಸಿದರು.
ಈ ಸಂದರ್ಭ ಅಶ್ರಫ್ ಬಡಾಜೆ, ಜಬ್ಬಾರ್ ಪದವು, ಸಂಜೀವ ಶೆಟ್ಟಿ, ಹರೀಶ್ ಮಾಡ, ಅಶ್ರಫ್ ಕುಂಜತ್ತೂರು, ಮುಸ್ತಫ ಉದ್ಯಾವರ, ಎಸ್ ಎಂ ಬಶೀರ್ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.