ಕಾಸರಗೋಡು| ಮುಹಮ್ಮದ್ ಹಾಜಿ ಕೊಲೆ ಪ್ರಕರಣ: ನಾಲ್ವರು ಆರೋಪಿಗಳಿಗೆ ಕಠಿಣ ಜೀವಾವಧಿ ಸಜೆ, ದಂಡ
ಕಾಸರಗೋಡು: 2008ರಲ್ಲಿ ಕಾಸರಗೋಡು ಗಲಭೆ ಸಂದರ್ಭ ಅಡ್ಕತ್ತಬೈಲ್ ಸಮೀಪದ ಸಿ.ಎ.ಮುಹಮ್ಮದ್ ಹಾಜಿ (56) ಎಂಬವರನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರು ಆರೋಪಿಗಳಿಗೆ ಕಠಿಣ ಜೀವಾವಧಿ ಸಜೆ ಮತ್ತು ತಲಾ ಒಂದು ಲಕ್ಷ ರೂ. ದಂಡ ವಿಧಿಸಿ ಕಾಸರಗೋಡು ಜಿಲ್ಲಾ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.
ಸಂತೋಷ್ ನಾಯ್ಕ್ (36), ಕೆ. ಶಿವ ಪ್ರಸಾದ್ (40) , ಕೆ. ಅಜಿತ್ ಕುಮಾರ್ (39), ಕಿಶೋರ್ ಕುಮಾರ್ (39) ಶಿಕ್ಷೆಗೊಳಗಾದ ಆರೋಪಿಗಳು.
2008ರ ಎ.18ರಂದು ಮುಹಮ್ಮದ್ ಹಾಜಿ ಅವರನ್ನು ಕಡಿದು ಕೊಲೆ ಮಾಡಲಾಗಿತ್ತು. ಮಸೀದಿಯಿಂದ ಮನೆಗೆ ಮರಳುತ್ತಿದ್ದಾಗ ತಂಡವು ಕೊಲೆ ಮಾಡಿತ್ತು.
ಕಾಸರಗೋಡು ಎಎಸ್ಪಿ ಪಿ. ಬಾಲಕೃಷ್ಣನ್ ನಾಯರ್ ತನಿಖೆಯ ವಿಚಾರಣೆ ನಡೆಸಿದ್ದರು. ದಿನಗಳ ಕಾಲ ನಡೆದ ಗಲಭೆ ಯಲ್ಲಿ ನಾಲ್ವರು ಕೊಲೆಗೀಡಾಗಿದ್ದರು.
ಎ. 14 ರಂದು ಕಾಸರಗೋಡು ಬೀಚ್ ರಸ್ತೆಯ ಸಂದೀಪ್ (20) ಎಂಬವರ ಕೊಲೆ ಬಳಿಕ ಗಲಭೆ ಉಂಟಾಗಿ ನಾಲ್ವರ ಕೊಲೆಯಲ್ಲಿ ಕೊನೆಗೊಂಡಿತ್ತು.
ಎ.16ರಂದು ನೆಲ್ಲಿಕುಂಜೆ ಬಂಗ್ರಗುಡ್ಡೆಯ ಮುಹಮ್ಮದ್ ಸಿನಾನ್ (20) ಹಾಗೂ ಪಿ. ಸುಹಾಸ್ ರನ್ನು ಕೊಲೆಗೈಯ್ಯಲಾಗಿತ್ತು. ಈ ನಾಲ್ಕು ಕೊಲೆ ಪ್ರಕರಣದ ಪೈಕಿ ಸಂದೀಪ್ ಮತ್ತು ಸಿನಾನ್ ಕೊಲೆ ಪ್ರಕರಣದ ಆರೋಪಿಗಳ ಮೇಲಿನ ಆರೋಪ ಸಾಬೀತಾಗದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಹಿಂದೆ ಖುಲಾಸೆಗೊಳಿಸಿತ್ತು. ಸುಹಾಸ್ ಕೊಲೆ ಪ್ರಕರಣದ ವಿಚಾರಣೆ ತಲಶೇರಿ ನ್ಯಾಯಾಲಯದಲ್ಲಿದೆ.