ಕಾಸರಗೋಡು: ಪೊಲೀಸರು ಹಿಂಬಾಲಿಸಿದ ಪರಿಣಾಮ ಅಪಘಾತದಲ್ಲಿ ವಿದ್ಯಾರ್ಥಿ ಮೃತ್ಯು ಪ್ರಕರಣ; ಎಸ್‌ಐ ಸೇರಿ ಮೂವರ ವರ್ಗಾವಣೆ
ಕಾಸರಗೋಡು : ಪೊಲೀಸರು ಹಿಂಬಾಲಿಸಿದ ಪರಿಣಾಮ ನಿಯಂತ್ರಣ ತಪ್ಪಿ ಕಾರು ಮಗುಚಿ ವಿದ್ಯಾರ್ಥಿ ಮೃತಪಟ್ಟ ಘಟನೆಗೆ ಸಂಬಂಧಪಟ್ಟಂತೆ ಕುಂಬಳೆ ಠಾಣೆಯ ಎಸ್‌ಐ ಸಹಿತ ಮೂವರು ಪೊಲೀಸರನ್ನು ವರ್ಗಾವಣೆ ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ . ವೈಭವ್ ಸಕ್ಸೆನಾ ಆದೇಶ ಹೊರಡಿಸಿದ್ದಾರೆ.
ಸಬ್ ಇನ್ಸ್ ಪೆಕ್ಟರ್ ರಜಿತ್, ಪೊಲೀಸರಾದ ದೀಪು, ರಂಜಿತ್ ರನ್ನು ಕಾಞಂಗಾಡ್ ಹೈವೇ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.
ವಿದ್ಯಾರ್ಥಿಯ ಸಾವಿಗೆ ಕಾರಣವಾದ ಅಪಘಾತದ ಕುರಿತು ಜಿಲ್ಲಾ ಅಪರಾಧದಳದ ಡಿವೈಎಸ್‌ಪಿ ನೇತೃತ್ವದಲ್ಲಿ ತನಿಖೆ ಆರಂಭಿಸಲಾಗಿದೆ. ತಪ್ಪಿತಸ್ಥರೆಂದು ಕಂಡುಬಂದಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಡಾ. ವೈಭವ್ ಸಕ್ಸೆನಾ ತಿಳಿಸಿದ್ದಾರೆ.
ಇದೇ ವೇಳೆ ವಿದ್ಯಾರ್ಥಿ ಮೃತಪಟ್ಟ ಘಟನೆಯಲ್ಲಿ ತಪ್ಪಿತಸ್ಥರಾದ ಪೊಲೀಸರ ವಿರುದ್ಧ ಕೊಲೆ ಕೃತ್ಯಕ್ಕೆ ಪ್ರಕರಣ ದಾಖಲಿಸುವಂತೆ ಕುಟುಂಬ ಒತ್ತಾಯಿಸಿದೆ.
ಆ. 25 ರಂದು ಕಳತ್ತೂರು ಪಳ್ಳದಲ್ಲಿ ಸಂಭವಿಸಿದ ಅಪಘಾತದಲ್ಲಿ ಅಂಗಡಿಮೊಗರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ ಟು ವಿದ್ಯಾರ್ಥಿ ಮುಹಮ್ಮದ್ ಫರ್ಹಾಝ್ (17) ಮೃತಪಟ್ಟಿದ್ದು, ಶಾಲೆಯಲ್ಲಿ ಓಣಂ ಕಾರ್ಯಕ್ರಮ ನಡೆದ ದಿನದಂದು ಫರ್ಹಾಝ್ ಹಾಗೂ ಸಹಪಾಠಿಗಳು ಸಂಚರಿಸಿದ ಕಾರನ್ನು ಪೊಲೀಸರು ತಪಾಸಣೆ ನಡೆಸಲು ಮುಂದಾದಾಗ ಅತೀ ವೇಗದಲ್ಲಿ ಚಲಾಯಿಸಿಕೊಂಡು ಹೋಗಿದ್ದು ಪರಿಣಾಮ ಕಾರು ಮಗುಚಿ ಬಿದ್ದು ಫರ್ಹಾಝ್ ಗಂಭೀರ ಗಾಯಗೊಂಡಿದ್ದು, ಮಂಗಳವಾರ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದನು. ಆದರೆ ಪೊಲೀಸ್ ವಾಹನ ಅತೀ ವೇಗದಲ್ಲಿ ಹಿಂಬಾಲಿಸಿದುದರಿಂದ ಕಾರು ನಿಯಂತ್ರಣ ತಪ್ಪಿ ಮಗುಚಲು ಕಾರಣವಾಗಿದೆ ಎಂದು ಕುಟುಂಬ ಹಾಗೂ ನಾಗರಿಕರು ಆರೋಪಿಸಿದ್ದಾರೆ.
ಪೊಲೀಸರ ವಿರುದ್ಧ ಕೊಲೆ ಮೊಕದ್ದಮೆ ದಾಖಲಿಸುವಂತೆ ಒತ್ತಾಯ
ವಿದ್ಯಾರ್ಥಿಯ ಸಾವಿಗೆ ಕಾರಣರಾದ ಪೊಲೀಸರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ಮುಸ್ಲಿಂ ಲೀಗ್ ಮಂಜೇಶ್ವರ ಮಂಡಲ ಸಮಿತಿ ನೇತೃತ್ವದಲ್ಲಿ ಬುಧವಾರ ಕುಂಬಳೆ ಠಾಣೆ ಯ ಮುಂಭಾಗದಲ್ಲಿ ಧರಣಿ ನಡೆಸಲಾಯಿತು.
ಮಂಜೇಶ್ವರ ಶಾಸಕ ಎ.ಕೆ. ಎಂ ಅಶ್ರಫ್ ಧರಣಿಯನ್ನು ಉದ್ಘಾಟಿಸಿದರು. ಬುಧವಾರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ ಮುಸ್ಲಿಂ ಯೂತ್ ಲೀಗ್ ಹಾಗೂ ಎಂ ಎಸ್ ಎಫ್ ಕಾರ್ಯಕರ್ತರು ಸೇರಿದಂತೆ 41 ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.