ಕಾಸರಗೋಡು | ದೇವಸ್ಥಾನದ ಉತ್ಸವದ ವೇಳೆ ಪಟಾಕಿ ಅವಘಡ : 150ಕ್ಕೂ ಅಧಿಕ ಮಂದಿಗೆ ಗಾಯ
ಕಾಸರಗೋಡು : ದೇವಸ್ಥಾನದ ಉತ್ಸವದ ವೇಳೆ ಪಟಾಕಿ ಸಿಡಿದು ಸಂಭವಿಸಿದ ಅವಘಡದಲ್ಲಿ 150ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ಕಾಸರಗೋಡು ಜಿಲ್ಲೆಯ ನೀಲೇಶ್ವರಂ ಬಳಿ ಸೋಮವಾರ ತಡರಾತ್ರಿ ಸಂಭವಿಸಿದೆ. ಗಾಯಾಳುಗಳ ಪೈಕಿ ಎಂಟು ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಸೋಮವಾರ ಮಧ್ಯರಾತ್ರಿ 12:30ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ನೀಲೇಶ್ವರಂನ ಅಂಜುತಂಬಲಂ ವೀರನ್ ಕಾವು ದೇವಸ್ಥಾನದಲ್ಲಿ ಕಳೆದ ರಾತ್ರಿ ವಾರ್ಷಿಕ ಕಲಿಯಾಟಂ ಉತ್ಸವ ನಡೆಯುತ್ತಿತ್ತು. ಈ ವೇಳೆ ಪಟಾಕಿ ಸಿಡಿಸಲಾಗಿದೆ. ಈ ಸಂದರ್ಭದಲ್ಲಿ ಪಟಾಕಿಯ ಕಿಡಿ ದೇವಸ್ಥಾನದ ಬಳಿಯೇ ಇದ್ದ ಪಟಾಕಿ ಸಂಗ್ರಹಾಗಾರಕ್ಕೆ ತಗುಲಿ ಈ ಅವಘಡ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ.
ಗಾಯಾಳುಗಳನ್ನು ಕಾಸರಗೋಡು, ಕಣ್ಣೂರು, ಮಂಗಳೂರಿನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ಹೆಚ್ಚಿನವರು ಮಕ್ಕಳು, ಮಹಿಳೆಯರು, ವೃದ್ದರಾಗಿದ್ದಾರೆ. ಕಾಞಂಗಾಡ್ ಜಿಲ್ಲಾಸ್ಪತ್ರೆಗೆ ದಾಖಲಾಗಿರುವ ಐವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. 33 ಮಂದಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾತೃಭೂಮಿ ವರದಿ ಮಾಡಿದೆ.
ಗಾಯಾಳುಗಳ ಪೈಕಿ 19 ಮಂದಿಯನ್ನು ಕಾಞಂಗಾಡ್ನ ಐಶಲ್ ಆಸ್ಪತ್ರೆಗೆ, 12 ಮಂದಿಯನ್ನು ಅರಿಮಲ ಆಸ್ಪತ್ರೆಗೆ, 40 ಮಂದಿಯನ್ನು ಸಂಜೀವನಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚುವರಿಯಾಗಿ 11 ಮಂದಿಯನ್ನು ನೀಲೇಶ್ವರ ತಾಲೂಕು ಆಸ್ಪತ್ರೆಗೆ ಮತ್ತು ಐವರನ್ನು ಕಣ್ಣೂರಿನ ಆಸ್ಟರ್ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಗಾಯಾಳುಗಳನ್ನು ಮಂಗಳೂರಿನ ಆಸ್ಪತ್ರೆಗಳು ಮತ್ತು ಕಣ್ಣೂರಿನ ಪರಿಯಾರಂನಲ್ಲಿರುವ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಕಾಸರಗೋಡು ಜಿಲ್ಲಾಧಿಕಾರಿ ಇನ್ಬಾ ಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಜಿಲ್ಲಾಡಳಿತದ ಉನ್ನತ ಅಧಿಕಾರಿಗಳು ಆಗಮಿಸಿದ್ದಾರೆ. ಅಧಿಕಾರಿಗಳು ಅವಘಡಕ್ಕೆ ಕಾರಣವೇನೆಂಬುದನ್ನು ಪತ್ತೆ ಹಚ್ಚಲು ತನಿಖೆ ನಡೆಸುತ್ತಿದ್ದಾರೆ.
ದೇವಸ್ಥಾನಕ್ಕೆ ಸಂಬಂಧಪಟ್ಟವರು ಪಟಾಕಿ ಸಿಡಿಸಲು ಅನುಮತಿ ಪಡೆದಿದರಲಿಲ್ಲ. ಈ ಹಿನ್ನೆಲೆಯಲ್ಲಿ ದೇವಸ್ಥಾನದ ಅಧ್ಯಕ್ಷ ಮತ್ತು ಕಾರ್ಯದರ್ಶಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಮಾತೃಭೂಮಿ ವರದಿ ಮಾಡಿದೆ.
ದೇವಸ್ಥಾನ ಆಡಳಿತ ಸಮಿತಿಯ ನಿರ್ಲಕ್ಷ್ಯವೇ ಅವಘಟಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿ ಪ್ರಾಥಮಿಕ ತನಿಖೆ ಈಗಾಗಲೇ ಆರಂಭವಾಗಿದೆ ಎಂದು ಕಾಸರಗೋಡು ಜಿಲ್ಲಾಧಿಕಾರಿ ಕೆ.ಇನ್ಬಾ ಶೇಖರ್ ಹೇಳಿದ್ದಾರೆ.
ಮಂಗಳವಾರ ದೇವಸ್ಥಾನದ ವತಿಯಿಂದ ಸುಮಾರು 6,000 ಮಂದಿಗೆ ಹಬ್ಬದ ಅಂಗವಾಗಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಆದರೆ, ಈಗ ಆಚರಣೆಯನ್ನು ಸ್ಥಗಿತಗೊಳಿಸಲಾಗಿದೆ.