ಕಾಸರಗೋಡು: ಪ್ರತಿಭಟನಾ ಸ್ಥಳದಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಕ್ವಾರಿ ಮಾಲಕ; ಆಸ್ಪತ್ರೆಗೆ ದಾಖಲು
ಕಾಸರಗೋಡು: ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿದ್ದ ಸ್ಥಳದಲ್ಲೇ ಕ್ವಾರಿ ಮಾಲಕರೋರ್ವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಪರಿಸರದಲ್ಲಿ ಇಂದು ಬೆಳಿಗ್ಗೆ ನಡೆದಿರುವ ಬಗ್ಗೆ ವರದಿಯಾಗಿದೆ.
ನೀಲೇಶ್ವರ ಮಡಿಕೈ ನಿವಾಸಿ ಗೋಪಾಲ ಕೃಷ್ಣ (60) ಆತ್ಮಹತ್ಯೆಗೆ ಯತ್ನಿಸಿದ ಕ್ವಾರಿ ಮಾಲಕ. ಗಂಭೀರ ಸ್ಥಿತಿಯಲ್ಲಿರುವ ಇವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ತಾವು ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಕಳೆದ ಒಂದು ವಾರದಿಂದ ಜಿಲ್ಲಾಧಿಕಾರಿ ಕಚೇರಿ ಪರಿಸರದಲ್ಲಿ ಕ್ವಾರಿ ಮಾಲಕರು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಆದರೆ ಬೇಡಿಕೆ ಈಡೇರಿಕೆಗೆ ಅಧಿಕಾರಿಗಳು ಮುಂದಾಗಿಲ್ಲ ಎಂದು ಮಾಲಕರು ಆರೋಪಿಸಿದ್ದಾರೆ.
ಕೆಂಗಲ್ಲು ಕ್ವಾರಿ ನಡೆಸಲು ಅನುಮತಿ ನೀಡಬೇಕು, ನಿಯಮ ಉಲ್ಲಂಘನೆ ಹೆಸರಿನಲ್ಲಿ ವಶಪಡಿಸಿಕೊಂಡ ಲಾರಿಗಳನ್ನು ಬಿಟ್ಟುಕೊಡಬೇಕು, ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಕೊಂಡು ಪ್ರತಿಭಟನೆ ನಡೆಯುತ್ತಿದೆ.