ಕುಂಬಳೆ: ಕೊಲೆಯಾದ ಸ್ಥಿತಿಯಲ್ಲಿ ಯುವಕನ ಮೃತದೇಹ ಪೊದೆಯಲ್ಲಿ ಪತ್ತೆ

Update: 2023-10-02 07:04 GMT

ಕಾಸರಗೋಡು, ಅ.2: ಯುವಕನೋರ್ವನ ಮೃತದೇಹ ಕೊಲೆಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕುಂಬಳೆಯಲ್ಲಿ ಇಂದು ಬೆಳಗ್ಗೆ ನಡೆದಿದೆ.

ಕೊಲೆಯಾದವರನ್ನು ಕುಂಬಳೆ ಶಾಂತಿಪಳ್ಳ ನಿವಾಸಿ ಅಬ್ದುಲ್ ರಶೀದ್(38) ಎಂದು ಗುರುತಿಸಲಾಗಿದೆ. ಕುಂಬಳೆ ಪೇಟೆ ಸಮೀಪ ಪೊದೆಯೊಂದರಲ್ಲಿ ಇಂದು ಬೆಳಗ್ಗೆ ರಶೀದ್ ಮೃತದೇಹ ಪತ್ತೆಯಾಗಿದೆ. ಈತ ನಾಲ್ಕು ವರ್ಷಗಳ ಹಿಂದೆ ನಡೆದ ಮಧೂರು ಪಟ್ಲ ನಿವಾಸಿ ಶಾನ್ ವಾಝ್(24) ಕೊಲೆ ಪ್ರಕರಣದ ಆರೋಪಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇಂದು ಬೆಳಗ್ಗೆ ಮಕ್ಕಳು ಆಟವಾಟಲು ಮೈದಾನಕ್ಕೆ ಬಂದ ವೇಳೆ ಮೈದಾನದಲ್ಲಿ ರಕ್ತದ ಕಲೆಗಳು ಕಂಡುಬಂದಿದೆ. ಈ ಬಗ್ಗೆ ಅವರು ಪರಿಸರ ವಾಸಿಗಳಿಗೆ ಮಾಹಿತಿ ನೀಡಿದ್ದು, ಬಳಿಕ ನಡೆದ ಶೋಧ ನಡೆಸಿದಾಗ ಮೈದಾನದಿಂದ ಸುಮಾರು 50 ಮೀಟರ್ ದೂರದ ಪೊದೆಯೊಂದರಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಕುಂಬಳೆ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಶ್ವಾನದಳ, ಬೆರಳಚ್ಚು ತಜ್ಞರು ಸ್ಥಳಕ್ಕಾಗಮಿಸಿ ಮಾಹಿತಿ ಕಲೆ ಹಾಕಿದ್ದಾರೆ.

2019ರ ಅಕ್ಟೋಬರ್ 18ರಂದು ನಡೆದ ಮಧೂರು ಪಟ್ಲ ನಿವಾಸಿ ಶಾನ್ ವಾಝ್ ಎಂಬವರ ಕೊಲೆ ಪ್ರಕರಣದ ಆರೋಪಿಗಳಲ್ಲಿ ಓರ್ವನಾಗಿ ಅಬ್ದುಲ್ ರಶೀದ್ ಬಂಧಿಸಲ್ಪಟ್ಟಿದ್ದ. ಶಾನ್ ವಾಝ್ ರನ್ನು ಕೊಲೆಗೈದು ನಗರದ ನಾಯಕ್ಸ್ ರಸ್ತೆಯ ಸಮೀಪ ಜನವಾಸ ಇಲ್ಲದ ಮನೆಯ ಬಾವಿಗೆ ಎಸೆಯಲಾಗಿತ್ತು. ಮಾದಕ ವಸ್ತು ವ್ಯವಹಾರಕ್ಕೆ ಈ ಕೊಲೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ರಶೀದ್ ಸೇರಿದಂತೆ ನಾಲ್ವರನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದರು.

ರಶೀದ್ ವಿರುದ್ಧ ಕುಂಬಳೆ, ಕಾಸರಗೋಡು ನಗರ ಠಾಣೆಗಳಲ್ಲಿ ಹಲವು ಪ್ರಕರಣಗಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News