ಮದೂರು: ಹಿರಿಯ ಯಕ್ಷಗಾನ ಕಲಾವಿದರಿಗೆ ಗೌರವಾರ್ಪಣೆ
Update: 2025-04-13 13:44 IST

ಕಾಸರಗೋಡು: ಮಧೂರು ಶ್ರೀಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಬ್ರಹ್ಮಕಲಶೋತ್ಸವ, ಮೂಡಪ್ಪ ಸೇವೆಯ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ಕಲಾವಿದರಾದ ಸಿರಿಬಾಗಿಲು ರಾಮಕೃಷ್ಣ ಮಯ್ಯ ಹಾಗೂ ರಾಮ್ ಎಲ್ಲಂಗಳ ಇವರನ್ನು ಗೌರವಿಸಲಾಯಿತು.
ಸಮಾಪನದ ಸಂದರ್ಭದಲ್ಲಿ ಮಧುಪುರ ಕ್ಷೇತ್ರ ಮಹಾತ್ಮೆ ಯಕ್ಷಗಾನ ಪ್ರಸಂಗವನ್ನು ಪ್ರಾರ್ತಿಸುಬ್ಬ ಸಭಾಂಗಣದಲ್ಲಿ ಪ್ರದರ್ಶಿಸಲಾಯಿತು. ಗಡಿನಾಡು ಕಾಸರಗೋಡಿನಲ್ಲಿ ಯಕ್ಷಗಾನೀಯವಾದ ಹಲವಾರು ಚಟುವಟಿಕೆಯಲ್ಲಿ ಪ್ರಧಾನ ಪಾತ್ರವಾಗಿರುವ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನವು ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಪ್ರಸಂಗ ಕರ್ತರಾದ ರಾಮ್ ಎಲ್ಲಂಗಳ ಅವರನ್ನು ಈ ಸಂದರ್ಭದಲ್ಲಿ ಪ್ರತಿಷ್ಠಾನದ ವತಿಯಿಂದ ಗೌರವಿಸಲಾಯಿತು. ಬ್ರಹ್ಮಕಲಶೋತ್ಸವ ಮೂಡಪ್ಪ ಸೇವೆಯ ಸಾಂಸ್ಕೃತಿಕ ಸಮಿತಿಯ ವತಿಯಿಂದ ಸಿರಿಬಾಗಿಲು ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಅವರನ್ನು ಗೌರವಿಸಲಾಯಿತು.