ಕಾಸರಗೋಡು: ಕೊಳವೆ ಬಾವಿ ಗುತ್ತಿಗೆದಾರನ ಕೊಲೆ ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Update: 2023-07-06 15:01 GMT

ಬಂಧಿತ ಆರೋಪಿಗಳು

ಕಾಸರಗೋಡು : ಬೇಳ ಚೌಕಾರ್ ಪಿಲಿಪಳ್ಳದ ಕೊಳವೆ ಬಾವಿ ಏಜಂಟ್ ಥೋಮಸ್ ಕ್ರಾಸ್ತ (53) ಅವರನ್ನು ಕೊಲೆಗೈದು ಶೌಚಾಲಯದ ಹೊಂಡಕ್ಕೆ ತಳ್ಳಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಚೌಕಾರಿನ ಮುನೀರ್ (40) ಮತ್ತು ಈತನ ಪತ್ನಿಯ ಸಹೋದರ ಅಶ್ರಫ್ (36) ಬಂಧಿತ ಆರೋಪಿಗಳು. ಚಿನ್ನಾಭರಣ ದರೋಡೆಗೈಯ್ಯಲು ಕೊಲೆ ನಡೆಸಿದ್ದಾಗಿ ಬಂಧಿತರು ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಥೋಮಸ್ ಕ್ರಾಸ್ತರ ದೇಹದಲ್ಲಿದ್ದ 35 ಗ್ರಾಂ ಚಿನ್ನದ ಸರ ಮತ್ತು ಏಳು ಗ್ರಾಂ ನ ಉಂಗುರವನ್ನು ಕಳವು ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವೈಭವ್ ಸಕ್ಸೇನಾ ತಿಳಿಸಿದ್ದಾರೆ. ಕೃತ್ಯ ಬೆಳಕಿಗೆ ಬಂದು ವಾರದೊಳಗೆ ಆರೋಪಿಗಳನ್ನು ಬಂಧಿಸಲಾಗಿದೆ. ಕೃತ್ಯದ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ. ಕಳವುಗೈದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜುಲೈ ಒಂದರಂದು ಕೃತ್ಯ ಬೆಳಕಿಗೆ ಬಂದಿತ್ತು. ನಾಲ್ಕು ದಿನಗಳಿಂದ ಥೋಮಸ್ ಕ್ರಾಸ್ತ ನಾಪತ್ತೆಯಾದುದರಿಂದ ಸಂಶಯಗೊಂಡು ಪರಿಸರವಾಸಿಗಳು ಕ್ವಾಟರ್ಸ್ ನ ಶೌಚಾಲಯದ ಹೊಂಡದಿಂದ ದುರ್ವಾಸನೆ ಬಂದಿದ್ದು, ಬದಿಯಡ್ಕ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲಿಸಿದಾಗ ದಾರುಣ ಕೃತ್ಯ ಬೆಳಕಿಗೆ ಬಂದಿತ್ತು. ಜೂನ್ 28ರಿಂದ ಥೋಮಸ್ ಕ್ರಾಸ್ತ ನಾಪತ್ತೆಯಾಗಿದ್ದರು. ಶೌಚಾಲಯದ ಸ್ಲಾಬ್ ನ ಒಂದು ಬದಿಯನ್ನು ತೆರೆದು ಮೃತದೇಹವನ್ನು ಗೋಣಿ ಚೀಲದಲ್ಲಿ ತುಂಬಿಸಿ ತಳ್ಳಲಾಗಿತ್ತು.

ಮೃತದೇಹದ ಮರಣೋತ್ತರ ಪರೀಕ್ಷೆ ಯನ್ನು ಕಣ್ಣೂರಿನ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಡೆಸಲಾಗಿದ್ದು, ತಲೆಗೆ ಬಲವಾದ ಪೆಟ್ಟು ಬಿದ್ದಿರುವುದು ಪರೀಕ್ಷೆಯಿಂದ ತಿಳಿದುಬಂದಿತ್ತು. ತಲೆಗೆ ಕಲ್ಲು ಎತ್ತಿ ಹಾಕಿ ಇವರು ಕೊಲೆ ನಡೆಸಿರುವುದು ತನಿಖೆಯಿಂದ ತಿಳಿದು ಬಂದಿತ್ತು.

ಡಿವೈಎಸ್ಪಿ ಪಿ .ಕೆ ಸುಧಾಕರನ್, ವಿದ್ಯಾನಗರ ಠಾಣಾ ಸರ್ಕಲ್ ಇನ್ಸ್ ಪೆಕ್ಟರ್ ಪಿ. ಪ್ರಮೋದ್, ಬದಿಯಡ್ಕ ಠಾಣಾ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ವಿನೋದ್ ಕುಮಾರ್ ತನಿಖಾ ತಂಡಕ್ಕೆ ನೇತೃತ್ವ ನೀಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News