ಸಿರಿಬಾಗಿಲು: ಎರಡು ದಿನಗಳ ತೆಂಕುತಿಟ್ಟು ಯಕ್ಷಮಾರ್ಗ ಪ್ರಾತ್ಯಕ್ಷಿಕೆ ಪ್ರದರ್ಶನ ಸಂಪನ್ನ

Update: 2024-08-30 05:54 GMT

ಕಾಸರಗೋಡು: ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇವರ ಪ್ರಾಯೋಜಕತ್ವದಲ್ಲಿ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಇವರ ಸಹಯೋಗದೊಂದಿಗೆ ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ನಡೆದ ಎರಡು ದಿನಗಳ ತೆಂಕುತಿಟ್ಟು ಯಕ್ಷ ಮಾರ್ಗ- ಶಿಬಿರ- ಯಕ್ಷಗಾನ ಪ್ರದರ್ಶನ ಭಾನುವಾರ, ಆ 25ರಂದು ಸಮಾರೋಪಗೊಂಡಿತು.

ತೆಂಕುತಿಟ್ಟು ಶಾಸ್ತ್ರೀಯ ನಾಟ್ಯ ಗುರುಗಳಾದ ಕರ್ಗಲ್ಲು ವಿಶ್ವೇಶ್ವರ ಭಟ್ ಇವರು ಎರಡು ದಿನಗಳ ಕಾಲ ನೀಡಿದ ಪ್ರಾತ್ಯಕ್ಷಿಕೆಗಳನ್ನು 50ಕ್ಕೂ ಹೆಚ್ಚು ಶಿಬಿರಾರ್ಥಿಗಳು ಸದುಪಯೋಗ ಪಡೆದರು. ಯಕ್ಷಗಾನದ ನಾಟ್ಯ, ಕುಣಿತ ಇತ್ಯಾದಿಗಳ ಕುರಿತಾಗಿ ಶಿಬಿರಾರ್ಥಿಗಳಿಗೆ ಗುರುಗಳು ಮಾರ್ಗದರ್ಶನ ನೀಡಿದರು.  

ಸಮಾರೋಪ ಸಮಾರಂಭಕ್ಕೆ ಮೊದಲು ಸಿರಿಬಾಗಿಲು ವೆಂಕಪ್ಪಯ್ಯ ಪ್ರಶಸ್ತಿಯನ್ನು ಯಕ್ಷಗಾನ ವಿದ್ವಾಂಸ, ಪ್ರಸಂಗಕರ್ತ, ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತರಾದ ಶ್ರೀಧರ ಡಿ.ಎಸ್. ರವರಿಗೆ ನೀಡಿ ಗೌರವಿಸಲಾಯಿತು. ಅಲ್ಲದೇ, ಸದಸ್ಯತ್ವ ನೋಂದಾವಣಾ ಅಭಿಯಾನದ ಅಂಗವಾಗಿ ಎಚ್. ಕೃಷ್ಣ ಭಟ್ ಮಂಗಳೂರು ಇವರಿಗೆ ಪೋಷಕರು ಗೌರವ ನೀಡಲಾಯಿತು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕಾಸರಗೋಡು ವಿಧಾನಸಭಾ ಕ್ಷೇತ್ರದ ಸದಸ್ಯರಾದ ಎನ್.ಎ .ನೆಲ್ಲಿಕುನ್ನು ಅವರು ಭಾಗವಹಿಸಿದರು. ಯಕ್ಷಗಾನ ಕ್ಷೇತ್ರಕ್ಕೆ ಸಿರಿಬಾಗಿಲು ಪ್ರತಿಷ್ಠಾನದ ಕೊಡುಗೆ ಅಪಾರವಾದುದು. ಸಿರಿಬಾಗಿಲು ಪ್ರತಿಷ್ಠಾನದಲ್ಲಿ ಯಕ್ಷಗಾನ ಅಕಾಡೆಮಿಯ ಕಾರ್ಯಕ್ರಮವು ಗಮನಾರ್ಹವಾಗಿದೆ. ಕೇರಳ ಸರ್ಕಾರದಿಂದಲೂ ಪ್ರತಿಷ್ಠಾನಕ್ಕೆ ಆರ್ಥಿಕ ಸಹಕಾರ ಸಿಗುವಂತೆ ವಿಧಾನಸಭೆಯಲ್ಲಿ ಪ್ರಸ್ತಾಪಿಸುತ್ತೇನೆ. ಪ್ರತಿಷ್ಠಾನಕ್ಕೆ ಬರುವ ರಸ್ತೆಯನ್ನು ದುರಸ್ತಿಗೊಳಿಸುವಲ್ಲಿ ಸಹಕರಿಸುತ್ತೇನೆ, ಎಂದು ಆಶ್ವಾಸನೆಯಿತ್ತರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಯಕ್ಷಗಾನ ಅಕಾಡೆಮಿಯ ರಿಜಿಸ್ಟರ್ ನಮ್ರತಾ ಅವರು , ಗಡಿನಾಡು ಕಾಸರಗೋಡಿನಲ್ಲಿ ಇಂತಹ ಚಟುವಟಿಕೆಗೆ ಅಕಾಡೆಮಿ ಯಾವತ್ತೂ ನಿಮ್ಮ ಜೊತೆ ಇದೆ ಎಂದು ಭರವಸೆ ಕೊಟ್ಟರು.

ಮುಖ್ಯ ಅತಿಥಿಗಳಾಗಿ ಯಕ್ಷಗಾನ ಅಕಾಡೆಮಿ ಸದಸ್ಯ ಕೃಷ್ಣಪ್ಪ ಕೀನ್ಯಾ ಭಾಗವಹಿಸಿದ್ದರು. ಗಡಿನಾಡು ಕಾಸರಗೋಡಿನ ಏಕೈಕ ಅಕಾಡೆಮಿಯ ಸದಸ್ಯರಾದ ಸತೀಶ ಅಡಪ ಸಂಕಬೈಲು ಅವರು ನಿರೂಪಿಸಿದರು. ಜಗದೀಶ್. ಕೆ ಕೂಡ್ಲು ಮುಂತಾದವರು ಸಭಾ ಕಾರ್ಯಕ್ರಮದಲ್ಲಿ ಸಹಕರಿಸಿದರು.

‘ಯಕ್ಷ ಬಳಗ’, ಹೊಸಂಗಡಿ, ಇವರಿಂದ ಶರಸೇತುಬಂಧನ ಯಕ್ಷಗಾನ ತಾಳಮದ್ದಲೆ ನಡೆಯಿತು. ಸಮಾರೋಪ ಸಮಾರಂಭದ ಬಳಿಕ ಸಿರಿಬಾಗಿಲು ಪ್ರತಿಷ್ಠಾನದ ನೇತೃತ್ವದಲ್ಲಿ ಪ್ರಸಿದ್ಧ ಕಲಾವಿದರಿಂದ ಭಕ್ತ ಪ್ರಹ್ಲಾದ ಯಕ್ಷಗಾನ ಪ್ರದರ್ಶನ ನಡೆಯಿತು.

Delete Edit
Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News