ಸಿರಿಬಾಗಿಲು ಯಕ್ಷ ವೈಭವ : ಹಿರಿಯ ಕಲಾವಿದರ ಮೆಚ್ಚುಗೆ ಗಳಿಸಿದ ಏಳು ಹವ್ಯಾಸಿ ತಂಡಗಳು
ಕಾಸರಗೋಡು: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಸಂಯೋಜನೆಯ 'ಸಿರಿಬಾಗಿಲು ಯಕ್ಷ ವೈಭವ'ದ ಎರಡನೇ ದಿನದವಾದ ಗುರುವಾರದಂದು ಕಾಸರಗೋಡಿನ ಸಿರಿಬಾಗಿಲು ಸಾಂಸ್ಕೃತಿಕ ಭವನದಲ್ಲಿ ಏಳು ಹವ್ಯಾಸಿ ಯಕ್ಷಗಾನ ತಂಡಗಳು ತಮ್ಮ ಪ್ರದರ್ಶನವನ್ನು ನೀಡಿದವು.
ಹವ್ಯಾಸಿ ಕಲಾವಿದರು ತಮ್ಮ ಉತ್ಸುಕ್ತ ಕಲಾಪ್ರದರ್ಶನ ಹಿರಿಯ ಕಲಾವಿದರ ಮೆಚ್ಚುಗೆಯನ್ನು ಗಳಿಸಿದರು. ಜೊತೆಗೆ ಯಕ್ಷಗಾನದ ಕ್ಷೇತ್ರದ ಪ್ರೇಕ್ಷಕರಿಗೂ ಹಬ್ಬದ ವಾತಾವರಣ ಸೃಷ್ಟಿಸಿದರು.
ಪ್ರದರ್ಶನ ನೀಡಿದ ಯಕ್ಷಗಾನ ತಂಡಗಳಿಗೆ ಪ್ರತಿಷ್ಠಾನದ ವತಿಯಿಂದ ಸ್ಮರಣಿಕೆಗಳನ್ನು ನೀಡಲಾಯಿತು.
ಮಂಡ್ಯದ ಸುಲ್ತಾನ್ ಗೌಡ, ಷಣ್ಮುಖನ್ ಮುಂತಾದ ಪ್ರೇಕ್ಷಕರು ಭಾಗವಹಿಸಿ ಮೆಚ್ಚುಗೆಯ ನುಡಿಯಾಡಿದರು. ಇಂದು ಶುದ್ಧ ಕನ್ನಡ ಉಳಿದಿದ್ದರೆ ಅದು ಯಕ್ಷಗಾನದಲ್ಲಿ ಮಾತ್ರ ಎಂಬ ಅನಿಸಿಕೆ ವ್ಯಕ್ತಪಡಿಸಿದರು.
ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಯಕ್ಷಗಾನದ ಹಿರಿಯ ಭಾಗವತರಾಗಿರುವ ರಾಮಕೃಷ್ಣ ಮಯ್ಯರು ತಂಡಗಳ ಪ್ರದರ್ಶನಗಳನ್ನು ನೀಡಿ ಎರಡನೆಯ ದಿನದ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಗೊಳಿಸಿದ್ದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜೊತೆಗೆ, ಯಕ್ಷಗಾನದ ಯಾವುದೇ ಪರಿಚಯವಿಲ್ಲದ, ಬಹಳ ದೂರದ ಊರಿನಿಂದ ಬಂದ ಪ್ರೇಕ್ಷಕರು ಕೂಡಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರದರ್ಶನಗಳನ್ನು ಮೆಚ್ಚಿದ್ದರ ವಿಚಾರವಾಗಿಯೂ ಸಂತೋಷ ತಿಳಿಸಿದರು.
'ಸಿರಿಬಾಗಿಲು ಯಕ್ಷ ವೈಭವ'ವನ್ನು ಪ್ರತಿಷ್ಠಾನವು ಜುಲೈ 17ರಿಂದ 20ರ ವರೆಗೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ಯಕ್ಷಗಾನ ಕಲಾಪೋಷಕರುಗಳ ಸಹಕಾರದಲ್ಲಿ ನಡೆಸುತ್ತಿದೆ.