ವಂದೇ ಭಾರತ್ ಎರಡನೇ ರೈಲಿಗೆ ಕಾಸರಗೋಡು ರೈಲು ನಿಲ್ದಾಣದಲ್ಲಿ ಚಾಲನೆ

Update: 2023-09-24 13:44 GMT

ಕಾಸರಗೋಡು : ಕೇರಳಕ್ಕೆ ಮಂಜೂರಾದ ವಂದೇ ಭಾರತ್ ಎರಡನೇ ರೈಲಿಗೆ ಕಾಸರಗೋಡು ರೈಲು ನಿಲ್ದಾಣದಲ್ಲಿ ರವಿವಾರ ಚಾಲನೆ ನೀಡಲಾಯಿತು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ರೈಲಿಗೆ ಹಸಿರು ನಿಶಾನೆ ತೋರಿದರು. ದೇಶದ 9 ಕಡೆಗಳಲ್ಲಿ ಏಕ ಕಾಲಕ್ಕೆ ವಂದೇ ಭಾರತ್ ರೈಲಿಗೆ ಚಾಲನೆ ನೀಡಲಾಯಿತು. ಕೇರಳಕ್ಕೆ ಮಂಜೂರಾದ ರೈಲು ಕಾಸರಗೋಡು - ತಿರುವನಂತಪುರ ನಡುವೆ ಸಂಚಾರ ನಡೆಸಲಿದೆ. 

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು , ರೈಲುಗಳು ರಾಜ್ಯಗಳ ಸಂಪರ್ಕವನ್ನು ಸುಧಾರಿಸುತ್ತದೆ ಮತ್ತು ಭಾರತದಾದ್ಯಂತ ಪ್ರವಾಸೋದ್ಯಮವನ್ನು ಒದಗಿಸಲಾಗಿದೆ ಎಂದು ಹೇಳಿದರು.

ಪಶ್ಚಿಮ ಬಂಗಾಳ, ಕೇರಳ, ಒಡಿಶಾ, ಜಾರ್ಖಂಡ್ ಮತ್ತು ಗುಜರಾತ್‌ನ ಜನರು ವಂದೇ ಭಾರತ್ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಈ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ದೇಶದ ಹೊಸ ಶಕ್ತಿಯನ್ನು ಬಿಂಬಿಸುತ್ತವೆ.

ಕಳೆದ ಹಲವು ವರ್ಷಗಳಿಂದ ಅಭಿವೃದ್ಧಿ ಕಾಣದ ಹಲವಾರು ರೈಲು ನಿಲ್ದಾಣಗಳಿವೆ. ಈ ನಿಲ್ದಾಣಗಳನ್ನು ಅಭಿವೃದ್ಧಿಪಡಿಸುವ ಕೆಲಸಗಳು ಮುಂದುವರೆದಿದೆ. 'ಆಜಾದಿ ಕಾ ಅಮೃತ್ ಕಾಲ'ದಲ್ಲಿ ಅಭಿವೃದ್ಧಿಪಡಿಸುವ ಅಮೃತ್ ಭಾರತ್ ಸ್ಟೇನ್ ಎಂದು ಕರೆಯಲಾಗುವುದು. 11 ರಾಜ್ಯಗಳಲ್ಲಿ ಸಂಪರ್ಕವನ್ನು ಸುಧಾರಿಸಲು ಸಹಾಯ ಮಾಡಲು ಒಂಬತ್ತು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಚಾಲನೆ ನೀಡಲಾಗಿದೆ ಎಂದರು.

ಈ ಒಂಬತ್ತು ರೈಲುಗಳು ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ಬಿಹಾರ್, ಪಶ್ಚಿಮಬಂಗಾಳ, ಕೇರಳ, ಒಡಿಸಾ, ಜಾರ್ಖಂಡ್ ಹಾಗೂ ಗುಜರಾತ್ ನಡುವೆ ವೇಗದ ಸಂಪರ್ಕ ಒದಗಿಸಲಿದೆ.

ಈ ರೈಲುಗಳು ಉದಯಪುರ-ಜೈಪುರ, ತಿರುನೆಲ್ವೆಲಿ-ಮಧುರೈ-ಚೆನ್ನೈ, ಹೈದರಾಬಾದ್-ಬೆಂಗಳೂರು, ವಿಜಯವಾಡ-ಚೆನ್ನೈ (ರೇಣಿಗುಂಟ ಮೂಲಕ), ಪಾಟ್ನಾ - ಹೌರಾ, ಕಾಸರಗೋಡು-ತಿರುವನಂತಪುರ, ರೂರ್ಕೆಲಾ-ಭುವನೇಶ್ವರ-ಪುರಿ, ರಾಂಚಿ-ಹೌರಾ ಹಾಗೂ ಜಾಮ್ನಗರ್-ಅಹ್ಮದಾಬಾದ್ ನಡುವೆ ಸಂಚರಿಸಲಿದೆ.

ಈ ರೈಲುಗಳು ದೇಶಾದ್ಯಂತ ಸಂಪರ್ಕವನ್ನು ಸುಧಾರಿಸುವ ಹಾಗೂ ರೈಲು ಪ್ರಯಾಣಿಕರಿಗೆ ವಿಶ್ವದರ್ಜೆಯ ಸೌಲಭ್ಯವನ್ನು ಒದಗಿಸುವ ಪ್ರಧಾನಿ ಅವರ ಕನಸನ್ನು ನನಸಾಗಿಸುವತ್ತ ಒಂದು ಹೆಜ್ಜೆಯಾಗಿದೆ.

ವಂದೇ ಭಾರತ್ ರೈಲುಗಳು ತಮ್ಮ ಕಾರ್ಯಾಚರಣೆಯ ಮಾರ್ಗಗಳಲ್ಲಿ ಅತಿ ವೇಗದಿಂದ ಸಂಚರಿಸಲಿದೆ. ಅಲ್ಲದೆ, ಪ್ರಯಾಣಿಕರ ಸಾಕಷ್ಟು ಸಮಯವನ್ನು ಉಳಿತಾಯ ಮಾಡಲಿದೆ.

ಕಾಸರಗೋಡು ರೈಲು ನಿಲ್ದಾಣ ದಲ್ಲಿ ನಡೆದ ಸಮಾರಂಭ ದಲ್ಲಿ ಕೇಂದ್ರ ಸಚಿವ ವಿ. ಮುರಳೀ ಧರನ್, ಕ್ರೀಡಾ ಹಾಗೂ ಯುವಜನ ಕಲ್ಯಾಣ ಸಚಿವ ಸಚಿವ ಅಬ್ದುಲ್ ರಹಮಾನ್ , ಸಂಸದ ರಾಜ್ ಮೋಹನ್ ಉಣ್ಣಿ ತ್ತಾನ್, ಶಾಸಕ ಎನ್. ಎ ನೆಲ್ಲಿಕುನ್ನು, , ಜಿಲ್ಲಾ ಪಂಚಾಯತ್ ಅಧ್ಯಕ್ಷ ಪಿ. ಬೇಬಿ ಬಾಲಕೃಷ್ಣನ್, ನಗರ ಸಭಾ ಅಧ್ಯಕ್ಷ ವಿ.ಎಂ ಮುನೀರ್, ಪಾಲಕ್ಕಾಡ್ ಡಿ.ಆರ್ ಎಂ ಅರುಣ್ ಕುಮಾರ್ ಚತುರ್ವೇದಿ ಮೊದಲಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News