ಮಡಿಕೇರಿ | ಕೇಂದ್ರ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ
ಮಡಿಕೇರಿ : ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸಂಸತ್‍ನಲ್ಲಿ ಅಗೌರವ ತೋರಿದ ಕೇಂದ್ರ್ರ ಗೃಹ ಸಚಿವ ಅಮಿತ್ ಶಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ನಗರದ ಜನರಲ್ ಕೆ.ಎಸ್.ತಿಮ್ಮಯ್ಯ ವೃತ್ತದಲ್ಲಿ ವಿವಿಧ ದಲಿತ ಸಂಘಟನೆಗಳು ಹಾಗೂ ಪ್ರಗತಿಪರರು ಪ್ರತಿಭಟನೆ ನಡೆಸಿದರು.
“ಅಂಬೇಡ್ಕರ್ ಹೆಸರು ನಮಗೆ ಶೋಕಿಯಲ್ಲ, ಸ್ಮರಣೆ, ಅಸ್ಮಿತೆ, ಬದುಕು” ಎನ್ನುವ ಘೋಷವಾಕ್ಯದಡಿ ದಲಿತ ಸಂಘಟನೆಗಳ ಒಕ್ಕೂಟ, ಸಮಾನ ಮನಸ್ಕರ ವೇದಿಕೆ ಮತ್ತು ಪ್ರಗತಿಪರ ಚಿಂತಕರ ಒಕ್ಕೂಟ ಮಾನವ ಸರಪಳಿ ರಚಿಸಿ ರಸ್ತೆತಡೆ ಪ್ರತಿಭಟನೆ ನಡೆಸಿದವು.
ಜಿಲ್ಲಾ ಅಹಿಂದ ಒಕ್ಕೂಟದ ಸ್ಥಾಪಕಾಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಇಡೀ ವಿಶ್ವದ ಗೌರವಕ್ಕೆ ಪಾತ್ರರಾಗಿ, ರಾಷ್ಟ್ರಕ್ಕೆ ಅತ್ಯಮೂಲ್ಯವಾದ ಸಂವಿಧಾನವನ್ನು ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅಗೌರವ ತೋರಿರುವುದನ್ನು ಖಂಡಿಸುವುದಲ್ಲದೆ, ಗೃಹ ಸಚಿವ ಅಮಿತ್ ಶಾ ಅವರು ರಾಷ್ಟ್ರದ ಜನತೆಯ ಕ್ಷಮೆಯಾಚನೆ ಮಾಡಬೇಕೆಂದು ಒತ್ತಾಯಿಸುವುದಾಗಿ ತಿಳಿಸಿದರು.
ಪ್ರಗತಿಪರ ಚಿಂತಕರ ಒಕ್ಕೂಟದ ಇಸಾಖ್ ಖಾನ್ ಮಾತನಾಡಿ, ಮಂದಿರ, ಮಸೀದಿಗಳ ವಿಚಾರಗಳ ಸಂದರ್ಭ ರಸ್ತೆಗಿಳಿಯುವ ಸಂಘಟನೆಗಳು, ಸಮಾನತೆಯ ಸಮಾಜ ನಿರ್ಮಾಣಕ್ಕೆ ಹಾದಿ ಮಾಡಿಕೊಟ್ಟ ಡಾ.ಅಂಬೇಡ್ಕರ್ ಅವರನ್ನು ಅವಹೇಳನ ಮಾಡುವಾಗ ರಸ್ತೆಗೇಕೆ ಇಳಿಯುತ್ತಿಲ್ಲವೆಂದು ಪ್ರಶ್ನಿಸಿದರು.
ಸಮಾನ ಮನಸ್ಕರ ವೇದಿಕೆಯ ನೆರವಂಡ ಉಮೇಶ್ ಮಾತನಾಡಿ, ಸಂವಿಧಾನವನ್ನು ಅಂಗೀಕರಿಸಿದ 75 ವರ್ಷಗಳ ಸುಸಂದರ್ಭದಲ್ಲಿ ಗೃಹ ಸಚಿವರು ಡಾ.ಅಂಬೇಡ್ಕರ್ ಅವರನ್ನು ಅಗೌರವದಿಂದ ಕಂಡಿರುವುದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕಿದೆ. ಹಿಂದಿನ ಜನಸಂಘ, ನಂತರದ ಬಿಜೆಪಿ ಯಾವತ್ತೂ ಸಂವಿಧಾನದ ಬಗ್ಗೆ ಒಲವನ್ನು ಹೊಂದಿಲ್ಲ. ಕೇಂದ್ರ ಮತ್ತು ರಾಜ್ಯದ ಸಂಸದರು ನಾವು ಆಯ್ಕೆಯಾಗಿ ಬಂದಿರುವುದೇ ಸಂವಿಧಾನವನ್ನು ತಿರುಚಲು ಎನ್ನುವ ವಿಚಾರವನ್ನು ಹೇಳಿಕೊಂಡೇ ಬಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ಸಂಚಾಲಕ ಮೋಹನ್ ಮೌರ್ಯ, ಕಾರ್ಯದರ್ಶಿ ಗಣೇಶ್, ಪ್ರೇಂ ಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮ್ಮದ್, ಪ್ರಮುಖರಾದ ಟಿ.ಹೆಚ್.ಉದಯ ಕುಮಾರ್, ವಿನಯ್, ಟಿ.ಈ.ಸುರೇಶ್, ಚಂದ್ರಶೇಖರ್, ಮೊಣ್ಣಪ್ಪ, ಲೀಲಾ ಶೇಷಮ್ಮ, ಕೆ.ಜಿ.ಪಿಟರ್, ಕೌಸರ್, ರಿಯಾಜುದ್ದೀನ್, ಖಲೀಲ್ ಭಾಷಾ ಮೊದಲಾದವರು ಪಾಲ್ಗೊಂಡಿದ್ದರು.