ಮಡಿಕೇರಿ | ನಕಲಿ ಅಂಕ ಪಟ್ಟಿ ಸಲ್ಲಿಸಿ ಬ್ರಾಂಚ್ ಪೋಸ್ಟ್ ಮಾಸ್ಟರ್ ಹುದ್ದೆ ಪಡೆದ ವ್ಯಕ್ತಿಗೆ ಕಠಿಣ ಜೈಲು ಶಿಕ್ಷೆ
ಮಡಿಕೇರಿ: ಅಂಚೆ ಇಲಾಖೆಯಲ್ಲಿ ಬ್ರಾಂಚ್ ಪೋಸ್ಟ್ ಮಾಸ್ಟರ್ ಹುದ್ದೆ ಪಡೆಯಲು ನಕಲಿ ಅಂಕ ಪಟ್ಟಿ ಸಲ್ಲಿಸಿ ಕೆಲಸ ಗಿಟ್ಟಿಸಿಕೊಂಡ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯ ವ್ಯಕ್ತಿಯೊಬ್ಬನಿಗೆ 7 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 1.25 ಲಕ್ಷ ರೂ. ದಂಡ ವಿಧಿಸಿದೆ. ಮಡಿಕೇರಿ ತಾಲೂಕಿನ ಕಾರೆಕಾಡು ಗ್ರಾಮದ ನಿವಾಸಿ ಸಂದೇಶ ಎಂ.ಬಿ ಎಂಬಾತನೇ ಶಿಕ್ಷೆಗೆ ಗುರಿಯಾದ ವ್ಯಕ್ತಿ.
2019ನೇ ಸಾಲಿನಲ್ಲಿ ಅಂಚೆ ಇಲಾಖೆಯ ನೇಮಕಾತಿಯಲ್ಲಿ ಆನ್‍ಲೈನ್ ಮೂಲಕ ಸಂದೇಶ ಎಂ.ಬಿ ಎಂಬಾತನು ಅರ್ಜಿ ಸಲ್ಲಿಸಿದ್ದ. ದಾಖಲೆ ಪರಿಶೀಲನೆ ವೇಳೆ ನಕಲಿ ಅಂಕ ಪಟ್ಟಿ ಸಲ್ಲಿಸಿ ಅಂಚೆ ಇಲಾಖೆಯಲ್ಲಿ ನೌಕರಿ ಪಡೆದು ಸರಕಾರಕ್ಕೆ ಮೋಸ ಮಾಡಿರುವುದು ಪತ್ತೆಯಾಗಿತ್ತು. ಈ ಕುರಿತು ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ವಿವಿಧ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. 2022 ಫೆ.25 ರಂದು ಸಂದೇಶನನ್ನು ಬಂಧಿಸಲಾಗಿತ್ತು.
ತೀರ್ಪು ಪ್ರಕಟ :
ಪ್ರಕರಣದ ತನಿಖಾಧಿಕಾರಿ ಶ್ರೀನಿವಾಸ, ತನಿಖಾ ಸಹಾಯಕಿ ದಿವ್ಯಾ, ಹೆಚ್.ಸಿ ಅವರುಗಳು ತನಿಖೆ ಪೂರ್ಣಗೊಳಿಸಿ ಆರೋಪಿ ಸಂದೇಶ ವಿರುದ್ಧ ದೋಷಾರೋಪಣಾ ಪತ್ರವನ್ನು 2022ರ ಡಿ.27ರಂದು ಮಡಿಕೇರಿಯ ಸೀನಿಯರ್ ಸಿವಿಲ್ ಜಡ್ಜ್ ಮತ್ತು ಸಿಜೆಎಂ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ವಿಚಾರಣೆಯನ್ನು ನಡೆಸಿದ ನ್ಯಾಯಾಲಯ ಆರೋಪಿ ಸಂದೇಶ ಎಂ.ಬಿ(32) ನಕಲಿ ಅಂಕಪಟ್ಟಿ ಸಲ್ಲಿಸಿ ಅಂಚೆ ಇಲಾಖೆಯಲ್ಲಿ ನೌಕರಿ ಪಡೆದು ಸರಕಾರಕ್ಕೆ ಮೋಸ ಮಾಡಿದ ಅಪರಾಧಕ್ಕಾಗಿ 7 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ರೂ. 1.25 ಲಕ್ಷ ರೂ. ದಂಡ ವಿಧಿಸಿ ನ್ಯಾಯಾಧೀಶರಾದ ಎನ್.ಬಿ.ಜಯಲಕ್ಷ್ಮಿ ಅವರು ತೀರ್ಪು ನೀಡಿದ್ದಾರೆ. ಸರಕಾರಿ ಅಭಿಯೋಜಕ ಬಿ.ಎಸ್.ಸಂತೋಷ್ ಪ್ರಕರಣದಲ್ಲಿ ವಾದ ಮಂಡಿಸಿದ್ದರು.