ಎಪ್ರಿಲ್ ಅಂತ್ಯದೊಳಗೆ ಕೊಡಗು ಡಿಸಿ ಕಚೇರಿ ತಡೆಗೋಡೆ ಕಾಮಗಾರಿ ಪೂರ್ಣ: ಸಚಿವ ಸತೀಶ್ ಜಾರಕಿಹೊಳಿ

Update: 2025-01-11 18:20 GMT

ಮಡಿಕೇರಿ: ಜಿಲ್ಲಾ ಕೇಂದ್ರ ಮಡಿಕೇರಿಯ ಜಿಲ್ಲಾಡಳಿತ ಭವನ ಬಳಿಯ ತಡೆಗೋಡೆ ಕಾಮಗಾರಿಯನ್ನು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಶನಿವಾರ ವೀಕ್ಷಿಸಿದರು.

ಸಂಬಂಧಪಟ್ಟ ಎಂಜಿನಿಯರ್ ಅವರಿಂದ ಮಾಹಿತಿ ಪಡೆದು ಮಾತನಾಡಿದ ಸಚಿವರು ತಡೆಗೋಡೆಯ ದುರಸ್ತಿ ಕಾರ್ಯವನ್ನು ಪ್ರಸಕ್ತ ಸಾಲಿನ ಏಪ್ರಿಲ್ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

ನಗರದ ಜನರಲ್ ತಿಮ್ಮಯ್ಯ ವೃತ್ತದಿಂದ ಮಂಗಳೂರು ಕಡೆಗೆ ತೆರಳುವ ರಸ್ತೆಯ ಬಲಭಾಗದಲ್ಲಿ ಕೆಲ ವರ್ಷಗಳ ಹಿಂದೆ, ಜಿಲ್ಲಾಡಳಿತ ಭವನದ ಸುರಕ್ಷತೆಗಾಗಿ ತಡೆಗೋಡೆಯನ್ನು ನಿರ್ಮಿಸಲಾಗಿತ್ತು. ಇದು ನಂತರದ ವರ್ಷದ ಭಾರೀ ಮಳೆಯ ಸಂದರ್ಭ ಕುಸಿತಕ್ಕೆ ಒಳಗಾಗುವ ಅಪಾಯವನ್ನು ಎದುರಿಸಿದ ಹಿನ್ನೆಲೆ, ದುರಸ್ತಿ ಕಾರ್ಯವನ್ನು ಕೈಗೊಳ್ಳಲಾಗಿದೆ ಎಂದರು.

ತಡೆಗೋಡೆಯನ್ನು ಎರಡು ಹಂತಗಳಲ್ಲಿ ಮೆಟ್ಟಿಲಿನ ಮಾದರಿಯಲ್ಲಿ ದುರಸ್ತಿ ಪಡಿಸಲಾಗುತ್ತದೆ. ಈ ಹಿಂದಿನ ತಡೆಗೋಡೆಯ ಅರ್ಧ ಭಾಗವನ್ನು ಅದು ಇರುವ ಯಥಾಸ್ಥಿತಿಯಲ್ಲಿ ಗಟ್ಟಿಗೊಳಿಸಿ, ಅದರ ಮೇಲೆ ಕಾಂಕ್ರೀಟ್ ಹಾಕಲಾಗುತ್ತದೆ. ಬಳಿಕ ಮತ್ತೊಂದು ಹಂತವನ್ನು 45 ಡಿಗ್ರಿ ಕೋನದಲ್ಲಿ ತಡೆಗೋಡೆ ನಿರ್ಮಿಸಿ ಬಲ ಪಡಿಸಲಾಗುತ್ತದೆ ಎಂದು ಸಚಿವರು ವಿವರಿಸಿದರು.

ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ, ಶಾಸಕ ಡಾ.ಮಂತರ್ ಗೌಡ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅದ್ಯಕ್ಷ ರಾಜೇಶ್ ಯಲ್ಲಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯರಾದ ವೀಣಾ ಅಚ್ಚಯ್ಯ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಲೋಕೋಪಯೋಗಿ ಇಲಾಖೆ ಅಧೀಕ್ಷಕ ಎಂಜಿನಿಯರ್ ಕೆ.ಎನ್.ನಳಿನಿ, ಕಾರ್ಯಪಾಲಕ ಎಂಜಿನಿಯರ್ ಎಂ.ಪಿ.ಮುತ್ತುರಾಜು, ಪ್ರಮುಖರಾದ ಚಂದ್ರಮೌಳಿ, ಟಿ.ಪಿ.ರಮೇಶ್, ತೆನ್ನೀರ ಮೈನಾ, ಕೆ.ಜಿ. ಪೀಟರ್, ಅಂಬೆಕಲ್ಲು ನವೀನ್, ಪ್ರಕಾಶ್ ಆಚಾರ್ಯ, ಯಾಕೂಬ್ ಸೇರಿದಂತೆ ಪ್ರಮುಖರು ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News