ಮಡಿಕೇರಿ ವಿದ್ಯಾರ್ಥಿನಿಯ ಕೊಲೆ ಪ್ರಕರಣದ ಕುರಿತು ಎಸ್‌ಪಿ ಹೇಳಿದ್ದೇನು?

Update: 2024-05-11 14:52 GMT

ಎಸ್‌.ಪಿ ರಾಮರಾಜನ್ \ ಆರೋಪಿ ಪ್ರಕಾಶ್

ಮಡಿಕೇರಿ : ಸೋಮವಾರಪೇಟೆ ತಾಲ್ಲೂಕಿನ ಸೂರ್ಲಬ್ಬಿಯ ಕುಂಬಾರಗಡಿಗೆಯಲ್ಲಿ ನಡೆದ ಅಪ್ರಾಪ್ತೆಯ ಹತ್ಯೆ ಪ್ರಕರಣದ ಆರೋಪಿಯನ್ನು ಇಂದು ಬೆಳಿಗ್ಗೆ ಬಂಧಿಸಲಾಗಿದೆ. ಬಾಲಕಿಯೊಂದಿಗೆ ವಿವಾಹ ಸಾಧ್ಯವಾಗದ ಹಿನ್ನೆಲೆ ಹತಾಶೆಯಿಂದ ಆರೋಪಿ ಪ್ರಕಾಶ್ ದುಷ್ಕ್ಯತ್ಯ ಎಸಗಿದ್ದಾನೆ ಎಂದು ಜಿಲ್ಲಾ ಪೊಲಿಸ್ ವರಿಷ್ಟಾಧಿಕಾರಿ ಕೆ.ರಾಮರಾಜನ್ ಅವರು ತಿಳಿಸಿದ್ದಾರೆ.

ನಗರದ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಸಂಜೆ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಎಸ್‍ಪಿ, ಬಂಧಿತ ಆರೋಪಿ ಪ್ರಕಾಶ್ (ಓಂಕಾರಪ್ಪ)ನನ್ನು ವಿಚಾರಣೆಗೆ ಒಳಪಡಿಸಿ, ಹತ್ಯೆಗೊಳಗಾದ ಮೀನಾಳ ರುಂಡವನ್ನು ಕುಂಬಾರಗಡಿಗೆಯ ಆಕೆಯ ಮನೆಯಿಂದ ಸುಮಾರು 50 ರಿಂದ 100 ಮೀಟರ್ ದೂರದ ಮರಕಾಡುಗಳ ನಡುವೆ ಪತ್ತೆ ಮಾಡಲಾಗಿದೆ. ಆರೋಪಿಯಿಂದ ಕೃತ್ಯಕ್ಕೆ ಬಳಸಲಾದ ಕತ್ತಿ ಮತ್ತು ಬಂದೂಕನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

10ನೇ ತರಗತಿ ಪರೀಕ್ಷಾ ಫಲಿತಾಂಶದ ದಿನವಾದ ಮೇ.9 ರಂದೇ ಕುಂಬಾರಗಡಿಗೆಯ ಸುಬ್ರಹ್ಮಣ್ಯ ಹಾಗೂ ಜಾನಕಿ ದಂಪತಿಯ ಕಿರಿಯ ಪುತ್ರಿ ಮೀನಾ ಹಾಗೂ ಪ್ರಕಾಶ್ ನ ವಿವಾಹ ನಿಶ್ಚಿತಾರ್ಥವಿತ್ತು. ಮಗಳಿಗೆ ಇನ್ನೂ 16 ವರ್ಷವಾಗಿದ್ದು, ಈ ವಯಸ್ಸಿನಲ್ಲಿ ವಿವಾಹ ಮಾಡಬಾರದೆನ್ನುವ ಬಗ್ಗೆ ಅಶಿಕ್ಷಿತರಾಗಿರುವ ಆಕೆಯ ಮನೆ ಮಂದಿಗೆ ಅರಿವಿರಲಿಲ್ಲ.

ಈ ಬಗ್ಗೆ ವಿಷಯ ಅರಿತ ಸಮಾಜ ಕಲ್ಯಾಣ ಇಲಾಖಾ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಮೀನ ಹಾಗೂ ಪ್ರಕಾಶ್ ಕಡೆಯ ಎರಡೂ ಕುಟುಂಬಗಳಿಗೆ ಮನವರಿಕೆ ಮಾಡಿಕೊಟ್ಟು, 18 ವರ್ಷದ ಬಳಿಕವಷ್ಟೆ ವಿವಾಹ ಮಾಡಬೇಕೆಂದು ತಿಳಿಸಿದರು. ಎರಡೂ ಕಡೆಯವರು ಇದಕ್ಕೆ ಸಮ್ಮತಿ ಸೂಚಿಸಿದ್ದರು.

ಆದರೆ ಸಂಜೆ ಪ್ರಕಾಶ್ ಮೀನಾಳ ಮನೆಗೆ ಬಂದು, ವಿವಾಹವನ್ನು ಮುಂದೂಡಲು ಸಾಧ್ಯವಿಲ್ಲ, ವಿವಾಹವಾಗಲೇಬೇಕೆಂದು ಆಗ್ರಹಿಸಿದ್ದ. ಇದಕ್ಕೆ ಮನೆ ಮಂದಿ ಸಮ್ಮತಿಸದ ಹಿನ್ನೆಲೆ ಆತ ದುಷ್ಕೃತ್ಯವೆಸಗಿರುವುದಾಗಿ ಎಸ್‍ಪಿ ರಾಮರಾಜನ್ ತಿಳಿಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯಾ ಆರೋಪಿಯ ವಿರುದ್ಧ ಐಪಿಸಿ 302, 317 ಹಾಗೂ ಪೋಕ್ಸೋ ಕಾಯ್ದೆಯಂತೆ ದೂರು ದಾಖಲಿಸಿಕೊಳ್ಳಲಾಗಿದೆ.

ಸಹವರ್ತಿಗಳ ಬಗ್ಗೆ ತನಿಖೆ 

ಮೀನಾಳ ಹತ್ಯೆ ಸಂದರ್ಭ ಕುಂಬಾರಗಡಿಗೆಯ ಆಕೆಯ ಮನೆ ಬಳಿ ವಾಹನವೊಂದರಲ್ಲಿ ಇನ್ನಿಬ್ಬರು ಪ್ರಕಾಶ್ ನೊಂದಿಗೆ ಆಗಮಿಸಿದ್ದು, ಇವರು ಆರೋಪಿಗೆ ಸಹಕರಿಸಲು ಬಂದಿದ್ದರೊ, ಇಲ್ಲವೋ ಎನ್ನುವ ಬಗ್ಗೆ ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ರಾಮರಾಜನ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News