ಲೋಕಸಭಾ ಚುನಾವಣೆಗೆ ಟಿಕೆಟ್ ಸಿಗಲ್ಲ ಎಂದು ಪ್ರತಾಪ್ ಸಿಂಹ ಹತಾಶರಾಗಿದ್ದಾರೆ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ

Update: 2023-12-30 12:29 GMT

ಮಡಿಕೇರಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಟಿಕೆಟ್ ಸಿಗುವುದಿಲ್ಲ ಎನ್ನುವ ಕಾರಣಕ್ಕಾಗಿ ಹತಾಶಗೊಂಡಿರುವ ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸೋಮಾರಿ ಎಂದು ಹೇಳುವ ಮೂಲಕ ಪ್ರತಾಪ್ ಸಿಂಹ ಅಗೌರವದಿಂದ ನಡೆದುಕೊಂಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಮೈಸೂರು- ಕೊಡಗು ಕ್ಷೇತ್ರದಲ್ಲಿ ಬಿಜೆಪಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರು ಸ್ಪರ್ಧಿಸಿದರೂ ಕಾಂಗ್ರೆಸ್ ಗೆಲುವು ಖಚಿತವೆಂದರು.

ಪ್ರತಾಪ್ ಸಿಂಹ ಅವರು ಮೊದಲು ಸುಳ್ಳು ಹೇಳುವುದನ್ನು ಬಿಡಬೇಕು. ಮೈಸೂರು- ಬೆಂಗಳೂರು ಹೆದ್ದಾರಿ ಅನುಮೋದನೆ ಸಂದರ್ಭ ಅವರು ಸಂಸದರೇ ಆಗಿರಲಿಲ್ಲ. ರಸ್ತೆಗೆಂದು ಕೇಂದ್ರ ಸರಕಾರ ಹಣ ನೀಡಿದರೆ ರಾಜ್ಯ ಸರಕಾರ ಜಾಗ ನೀಡಿದೆ. ಕೇಂದ್ರ ಪುಕ್ಕಟೆ ಹಣ ನೀಡಿಲ್ಲ, ಹೆದ್ದಾರಿಯಲ್ಲಿ 900 ರೂ. ಟೋಲ್ ಸಂಗ್ರಹಿಸಲಾಗುತ್ತಿದೆ. ಸಂಸದರಾಗಿ ಕೊಡಗು ಜಿಲ್ಲೆಗೆ ಪ್ರತಾಪ್ ಸಿಂಹ ಏನು ಕೊಡುಗೆ ನೀಡಿದ್ದಾರೆ ಎನ್ನುವುದನ್ನು ಬಹಿರಂಗ ಪಡಿಸಲಿ. ಅವರು ಪತ್ರಿಕಾ ಪ್ರಕಟಣೆ ಮೂಲಕವಾದರೂ ತಿಳಿಸಲಿ ಎಂದರು.

ಮುಂದಿನ ಚುನಾವಣೆಯಲ್ಲಿ ಪ್ರತಾಪ್ ಸಿಂಹ ಅವರು ಸ್ಪರ್ಧಿಸಿದರೆ ಸೋಲು ಖಚಿತವೆಂದು ಲಕ್ಷ್ಮಣ ಭವಿಷ್ಯ ನುಡಿದರು.

ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಬಂಧಿಸಿಲ್ಲ ಎನ್ನುವ ಕಾರಣಕ್ಕಾಗಿ ಕಾಂಗ್ರೆಸ್ ಪಕ್ಷ ಮುಸ್ಲಿಮರ ಪರವಾಗಿಲ್ಲವೆಂದು ಬಿಜೆಪಿ ಮಂದಿಯೇ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಹಿಂದೂ, ಮುಸ್ಲಿಂ ಸೇರಿದಂತೆ ದೇಶದ ಎಲ್ಲಾ ಜನರ ಪರವಾಗಿದೆ. ಕಲ್ಲಡ್ಕ ಪ್ರಭಾಕರ ಭಟ್ ಅವರ ವಿಚಾರಣೆ ನಡೆಯುತ್ತಿದ್ದು, ತಪ್ಪಿದ್ದರೆ ಕಾನೂನು ಕ್ರಮವಾಗಲಿದೆ. ಯಾರು ಕೂಡ ಅಪಪ್ರಚಾರಕ್ಕೆ ಕಿವಿಗೊಡಬಾರದು ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರುಗಳು ಸಣ್ಣಪುಟ್ಟ ವಿಚಾರಗಳಿಗೂ ಪತ್ರಿಕಾಗೋಷ್ಠಿ ಕರೆದು ಕಾಂಗ್ರೆಸ್ ಸರಕಾರದ ವಿರುದ್ಧ ಮಾತನಾಡುತ್ತಿದ್ದಾರೆ. ಆದರೆ ಅವರದ್ದೇ ಪಕ್ಷದ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಕೋವಿಡ್ ಹಗರಣದ ಕುರಿತು ಮಾಡಿರುವ ಆರೋಪಕ್ಕೆ ಯಾಕೆ ಉತ್ತರ ನೀಡುತ್ತಿಲ್ಲವೆಂದು ಲಕ್ಷ್ಮಣ ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಕೊಡಗು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುರಯ್ಯ ಅಬ್ರಾರ್ ಹಾಗೂ ಮೈಸೂರು ಕಾಂಗ್ರೆಸ್ ಪ್ರಮುಖ ಬಿ.ಎಂ.ರಾಮು ಉಪಸ್ಥಿತರಿದ್ದರು. 

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News