ಪ್ರಧಾನಿ ಮೋದಿ ಕಾರ್ಪೊರೇಟ್ ಕಂಪನಿಗಳ 16 ಲಕ್ಷ ಕೋಟಿ ರೂ. ಸಾಲಮನ್ನಾ ಮಾಡಿದ್ದಾರೆ : ರಾಹುಲ್ ಗಾಂಧಿ
ಕೋಲಾರ : ದೇಶದಲ್ಲಿ 25 ಶ್ರೀಮಂತ ಬಂಡವಾಳ ಶಾಹಿಗಳಿದ್ದು, ಪ್ರಧಾನಿ ನರೇಂದ್ರ ಮೋದಿ ಈ ಕಾರ್ಪೊರೇಟ್ ಕಂಪನಿಗಳ 16 ಲಕ್ಷ ಕೋಟಿ ರೂ. ಸಾಲಮನ್ನಾ ಮಾಡಿದ್ದಾರೆ. ನರೇಗಾ ಯೋಜನೆಯಡಿ 25 ವರ್ಷಗಳಲ್ಲಿ ಮಾಡಬಹುದಾದ ಕಾಮಗಾರಿಗಳಷ್ಟು ಹಣವನ್ನು ಈ ಶ್ರೀಮಂತರಿಗೆ ನೀಡಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.
ಕೋಲಾರ ಲೋಕಸಭಾ ಕ್ಷೇತ್ರದ ಮಾಲೂರು ಹೊಸಕೋಟೆ ರಸ್ತೆಯ ಚೊಕ್ಕಂಡಹಳ್ಳಿ ಗೇಟ್ ಬಳಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ಪ್ರಜಾಧ್ವನಿ-2.0 ಸಮಾವೇಶದಲ್ಲಿ ಜನರನ್ನು ಉದ್ದೇಶಿಸಿ ಅವರು ಮಾತನಾಡಿದರು.
"ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತದಿಂದ ಅಧಿಕಾರಕ್ಕೆ ಬಂದರೆ, ಪ್ರತಿ ಕುಟುಂಬದ ಹಿರಿಯ ಮಹಿಳೆಗೆ ವಾರ್ಷಿಕ ಒಂದು ಲಕ್ಷ ರೂ., ಜಾತಿ ಗಣತಿ, ದಲಿತರು, ಆದಿವಾಸಿಗಳು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರಿಗೆ ಎಲ್ಲಾ ಸ್ತರದ ಉದ್ಯೋಗದಲ್ಲಿ ಅವಕಾಶಗಳು ಸೇರಿದಂತೆ 5 ಗ್ಯಾರಂಟಿಗಳನ್ನು ನೀಡುವ ಮೂಲಕ ದೇಶದ ರಾಜಕಾರಣದ ಮೇಲೆ ಹೊಸ ಕ್ರಾಂತಿಕಾರಿ ಬೆಳವಣಿಗೆಗೆ ನಾಂದಿ ಹಾಡಲಾಗುವುದು ಎಂದು ಹೇಳಿದರು.
ಈ ದೇಶದಲ್ಲಿ ಕೋಟ್ಯಾಂತರ ರೈತರು ವ್ಯವಸಾಯ ಮಾಡುತ್ತಿದ್ದಾರೆ. ಈ ದೇಶದ ರೈತರ ಸಾಲವನ್ನು ಮನ್ನಾ ಮಾಡಲು ಕೇಳಿದಾಗ ಮೋದಿ ಬಾಯಿಂದ ಒಂದೇ ಒಂದು ಮಾತು ಹೊರಡಲಿಲ್ಲ. ಆದರೆ, 25 ಜನ ಶ್ರೀಮಂತರ 16 ಲಕ್ಷ ಕೋಟಿ ರೂ. ಸಾಲವನ್ನು ಮನ್ನಾ ಮಾಡಿಬಿಟ್ಟರು. ಇಂದು ಭಾರತದ ಪರಿಸ್ಥಿತಿ 22 ಜನ ಶ್ರೀಮಂತರ ಹತ್ತಿರ ದೇಶದ 72 ಕೋಟಿ ಜನರ ಆಸ್ತಿ ಇದೆ. ಇದು ಮೋದಿ ರೈತರಿಗೆ ಮಾಡಿದ ಅನ್ಯಾಯ ಎಂದರು.
ಇಂದು ಅದಾನಿ ಮಗನಿಗೆ ಅವರು ಊಹೆ ಮಾಡಿದ್ದನ್ನು ಪಡೆಯುವ ಶಕ್ತಿ ಇದೆ. ಅದಾನಿ ಯಾವುದೇ ಭೂಮಿ ಕೇಳಿದರೂ, ತಕ್ಷಣ ಕಡು ಬಡ ರೈತನ ಭೂಮಿಯನ್ನೂ ಸಹ ಮುಲಾಜಿಲ್ಲದೆ ಮೋದಿ ಕಿತ್ತು ಕೊಡುತ್ತಾರೆ. ಮುಂಬೈ ವಿಮಾನ ನಿಲ್ದಾಣ ಕೇಳಿದರೂ ಸಿಬಿಐ, ಈಡಿ, ಐಟಿ ಮೊದಲಾದ ತನಿಖಾ ಸಂಸ್ಥೆಗಳನ್ನು ಬಳಸಿ ಅದನ್ನೂ ಅದಾನಿಗೆ ಕೊಡುತ್ತಾರೆ ಎಂದು ಆಕ್ರೋಶ ಹೊರಹಾಕಿದರು.
ನಾನು ಉದ್ಯಮಗಳು, ಕಾರ್ಖಾನೆಗಳು ಇರಬಾರದು ಎಂದು ಹೇಳುತ್ತಿಲ್ಲ. ಅವರಿಗೂ ಪ್ರೋತ್ಸಾಹ ನೀಡಬೇಕು ಆದರೆ, ಬಹುಸಂಖ್ಯಾತ ಜನರ ಹಿತಾಸಕ್ತಿಯನ್ನು ಸಹ ಗಮನದಲ್ಲಿಡಬೇಕು. ನಮ್ಮ ಈ ಮಾತುಗಳು ಮಾದ್ಯಮಗಳಲ್ಲಿ ನೋಡಲು ಸಾಧ್ಯವಿಲ್ಲ. ಮಾದ್ಯಮಗಳಲ್ಲಿ ಮೋದಿ, ಕ್ರಿಕೆಟ್ ಆಟಗಾರರು, ಸಿನಿಮಾ ನಟ-ನಟಿಯರು ಮಾತ್ರ ಕಾಣುತ್ತಾರೆ. ಆದುದ್ದರಿಂದ ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ಚಲಾವಣೆ ಮಾಡಿ ಬೆಂಬಲಿಸಿ ಎಂದು ಮನವಿ ಮಾಡಿದರು.
ಅಜ್ಜಿ ಜೊತೆ ಕೋಲಾರಕ್ಕೆ ಬಂದ ನೆನಪು ಮೆಲುಕು ಹಾಕಿದ ರಾಹುಲ್ ಗಾಂಧಿ
ನಾನು ಚಿಕ್ಕವನಿದ್ದಾಗ ಕೋಲಾರ ಗೋಲ್ಡ್ ಫೀಲ್ಡ್‌ಗೆ ನನ್ನ ಅಜ್ಜಿ ಇಂದಿರಾಗಾಂಧಿ ಅವರ ಜೊತೆ ಬಂದಿದ್ದೆ. ಸುರಂಗದ ಒಳಗೆ ಹೋಗಿ ಅಲ್ಲಿ ಕಾರ್ಮಿಕರನ್ನು ಮಾತನಾಡಿಸಿದ್ದು ನೆನಪಿದೆ. ಅಲ್ಲಿ ಚಿನ್ನದ ಇಟ್ಟಿಗೆಯನ್ನು ನೋಡಿ ಕೋಲಾರ ಎಷ್ಟು ಸಂಪತ್ಭರಿತವಾಗಿದೆ ಎಂದು ತಿಳಿಯಿತು ಎಂದು 1980ರಲ್ಲಿ ಬಿಜಿಎಂಲ್ ಸಂಸ್ಥೆಯ ಶತಮಾನೋತ್ಸವಕ್ಕೆ ಆಗಮಿಸಿದ ದಿನಗಳನ್ನು ಮೆಲುಕು ಹಾಕಿದರು.