ಬರಗಾಲದಲ್ಲಿ ಸಾಲ ವಸೂಲಿಗೆ ಬರುವ ಅಧಿಕಾರಿಗಳನ್ನು ಕಂಬಕ್ಕೆ ಕಟ್ಟಿ ಹಾಕಬೇಕು: ರಾಜ್ಯಾಧ್ಯಕ್ಷ ಬಸವರಾಜಪ್ಪ ಆಕ್ರೋಶ

Update: 2024-09-25 18:31 GMT

ಕೋಲಾರ: ಬರಗಾಲದಲ್ಲಿ ಸಾಲ ವಸೂಲಾತಿಗೆ ನೋಟಿಸ್ ನೀಡುವುದು, ಮನೆ ಜಫ್ತಿ ಮಾಡುವ ಬ್ಯಾಂಕ್ ಅಧಿಕಾರಿಗಳನ್ನು ಕಂಬಕ್ಕೆ ಕಟ್ಟಿಹಾಕಬೇಕೆಂದು ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಟಿ. ಚನ್ನಯ್ಯ ರಂಗಮಂದಿರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆಯೋಜಿಸಿದ್ದ ರೈತರ ಬೃಹತ್ ಹಕ್ಕೋತ್ತಾಯ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಬರದ ನಾಡು ಕೋಲಾರ ಜಿಲ್ಲೆಯ ನೀರಿನ ಹಕ್ಕಿಗಾಗಿ ಹೋರಾಟ ಆರಂಭಿಸಲಾಗಿದ್ದು ರೈತರು ಸಂಘಟಿತರಾಗದ ಹೊರತು ಸಮಸ್ಯೆಗಳು ಪರಿಹಾರ ಆಗುವುದಿಲ್ಲ. ಭೂ ಸ್ವಾಧೀನ ಕಾಯ್ದೆ ವಾಪಸ್‌ಗೆ ಸರ್ಕಾರದ ಮೇಲೆ ಒತ್ತಡ ಹೇರಲಾಗಿದ್ದು ಶೀಘ್ರದಲ್ಲೇ ಈ ಸಂಬಂಧ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ವಿಷಯವನ್ನು ಮನವರಿಕೆ ಮಾಡಿಕೊಡಲಾಗುವುದೆಂದು ತಿಳಿಸಿದರು.

ಕೋಲಾರ ಚಿಕ್ಕಬಳ್ಳಾಪುರ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಎಚ್.ಆಂಜನೇಯರೆಡ್ಡಿ ಮಾತನಾಡಿ, ಕೊಳಚೆ ನೀರಿಗೆ ಪೈಪ್‌ಲೈನ್ ಹಾಕಲು ಇರುವ ಬದ್ಧತೆ ೩ನೇ ಹಂತದ ನೀರಿನ ಶುದ್ಧೀಕರಣಕ್ಕೆ ಇಲ್ಲ. ನೀರಿನ

ಶುದ್ಧೀಕರಣದ ಘಟಕಗಳನ್ನು ಉನ್ನತೀಕರಿಸದಿದ್ದರೆ ಮುಂದಿನ 10 ವರ್ಷದಲ್ಲಿ ಹಳ್ಳಿಗೊಂದು ಕ್ಯಾನ್ಸರ್, ಕಿಡ್ನಿ ಆಸ್ಪತ್ರೆ ತೆರೆಯಬೇಕಾಗುತ್ತದೆ ಎಂದು ಎಚ್ಚರಿಸಿದರು.

ಹಿರಿಯ ದಸಂಸ ಮುಖಂಡ ಟಿ.ವಿಜಯಕುಮಾರ್ ಮಾತನಾಡಿ, ಜಿಲ್ಲೆಯ ಎಲ್ಲ ಕಚೇರಿಗಳಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಮತ್ತೊಂದೆಡೆ ಕಂದಾಯ ಇಲಾಖೆಯಲ್ಲಿ ರೈತರಿಗೆ ಜಮೀನಿನ ಖಾತೆ ಮಾಡಿಕೊಡಲು ತೊಂದರೆ ನೀಡಲಾಗುತ್ತಿದೆ. ಕಡತಗಳು ಮಿಸ್ ಆಗಿದೆ ಎಂದು ಹತ್ತಾರು ವರ್ಷಗಳಿಂದ ಖಾತೆ ಮಾಡದೆ ಸತಾಯಿಸಲಾಗುತ್ತಿದ್ದು ಮೂಲ ದಾಖಲೆಗಳ ಸಂರಕ್ಷಣೆ ಯಾರ ಹೊಣೆ ಎಂದು ಪ್ರಶ್ನಿಸಿದರು. ಭ್ರಷ್ಟಾಚಾರ ತೊಲಗದ ಹೊರತು ರೈತರ ಸಮಸ್ಯೆಗಳು ನಿವಾರಣೆ ಆಗುವುದಿಲ್ಲ ಎಂದರು.

ರೈತ ಸಂಘದ ಜಿಲ್ಲಾಧ್ಯಕ್ಷ ಬೆಡಶೆಟ್ಟಿಹಳ್ಳಿ ರಮೇಶ್ ಮಾತನಾಡಿ, ಹೋರಾಟಗಳು ಮಾರಾಟ ಆಗಿರುವ ಸಂದರ್ಭದಲ್ಲಿ ರೈತ ಸಮಾವೇಶಗಳು ಆಶಾದಾಯಕವಾಗಿದ್ದು ಪ್ರಚಾರಪ್ರಿಯ ಸಂಘಟನೆಗಳಿಂದ ಸಮಾಜಕ್ಕೆ ಯಾವುದೇ ಪ್ರಯೋಜನವಿಲ್ಲ. ಹಳ್ಳಿಗಳಲ್ಲಿ ಒಣಕಸ,ಹಸಿಕಸ ಪ್ರತ್ಯೇಕ ಮಾಡುವ ಪ್ರಕ್ರಿಯೆ ಸರಿಯಲ್ಲ. ಹಾಗಾದರೆ ಕಸದತಿಪ್ಪೆ, ಸಾವಯವ ಬೇಸಾಯದ ಪರಿಕಲ್ಪನೆ ಕೊನೆಗೊಳ್ಳುತ್ತದೆ ಎಂದು ನುಡಿದರಲ್ಲದೆ ರೈತರು ಮನೆಯಲ್ಲಿನ ಎಲ್ಲ ಕಸವನ್ನು ಹಾಕಿ ಕೊಟ್ಟಿಗೆ ಗೊಬ್ಬರ ತಯಾರಿ ಮಾಡಿ ವ್ಯವಸಾಯ ಮಾಡಬೇಕೆಂದು ನುಡಿದರು.

ಜಿಲ್ಲಾಧಿಕಾರಿಗಳ ಪರವಾಗಿ ಆಗಮಿಸಿದ್ದ ತಹಶಿಲ್ದಾರರವರಿಗೆ ರೈತರ ಹಕ್ಕೋತ್ತಾಯಗಳ ಮನವಿಯನ್ನು ಇದೇ ಸಂಧರ್ಭದಲ್ಲಿ ನೀಡಲಾಯಿತು.

ವೇದಿಕೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷ ಬೈಚೇಗೌಡ,ಜಿಲ್ಲಾ ಅಧ್ಯಕ್ಷ ಬೆಡಶೆಟ್ಟಹಳ್ಳಿ ರಮೇಶ್,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ ಆನಂದಕುಮಾರ್,ಜಿಲ್ಲಾ ಕಾರ್ಯಾಧ್ಯಕ್ಷ ದಿನ್ನೆ ಹೊಸಹಳ್ಳಿ ರಮೇಶ್,ಹಿರಿಯ ರೈತ ಮುಖಂಡರುಗಳಾದ ಅಬ್ಬಣಿ ಶ್ರೀನಿವಾಸ್,

ಸಿ.ವಿ.ಪ್ರಭಾಕರ್ ಗೌಡ,ದಲಿತ ಮುಖಂಡರುಗಳಾದ ಪಂಡಿತ್ ಮುನಿ ವೆಂಕಟಪ್ಪ, ರಾಧಮ್ಮ, ಭಾರತಮ್ಮ, ಗಿರಿಜಮ್ಮ,ಚಂದ್ರಿಕಾ ಸೇರಿದಂತೆ ಸಂಘದ ಜಿಲ್ಲಾ ಮತ್ತು ತಾಲ್ಲೂಕು ಸಮಿತಿಗಳ ಮುಖಂಡರುಗಳು ಉಪಸ್ಥಿತರಿದ್ದರು.

ಎತ್ತಿಹೊಳೆ ಬರಲಿಲ್ಲ: ಕೊಳಚೆ ನೀರು ತಪ್ಪಿಲ್ಲ- ಅಬ್ಬಣಿ ಶಿವಪ್ಪ

ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರಕ್ಕೆ ಕುಡಿಯುವ ನೀರಿಗೆ ರೂಪಿತವಾದ ಎತ್ತಿನಹೊಳೆ ಯೋಜನೆ ಇದೀಗ ಹಾಸನ, ಚಿಕ್ಕಮಗಳೂರಿಗೆ ಸೀಮಿತ ಆಗಿದ್ದು ರಾಜಕಾರಣಿಗಳು-ಅಧಿಕಾರಿಗಳ ಖಜಾನೆ ತುಂಬಿಸಿಕೊಳ್ಳಲು ಸಹಕಾರಿ ಆಗಿದೆ. ಕೃಷ್ಣಾ ಬಿ ಸ್ಕೀಂ ನೀರೂ ಸಹಾ ಜಿಲ್ಲೆಗೆ ಇಲ್ಲವಾಗಿದ್ದು ಜನತೆ ಬೆಂಗಳೂರಿನ ಕೊಚ್ಚೆ ನೀರನ್ನು ಕೆರೆಗಳಿಗೆ ಹರಿಸಿಕೊಂಡು ಪರಿತಾಪ ಪಡುವಂತಾಗಿದೆ. ೬೦ ವರ್ಷದ ಜಮೀನುಗಳು ಇನ್ನೂ ಪಿ ನಂಬರ್‌ಗಳಲ್ಲೇ ಇದ್ದರೂ ಕಂದಾಯ ಇಲಾಖೆ ಅಧಿಕಾರಿಗಳು ಹಣ ಪಡೆದುಕೊಂಡು ೫ ವರ್ಷದ ಹಿಂದೆ ಮಂಜೂರಾದ ಜಮೀನುಗಳಿಗೆ ಖಾತೆ ಮಾಡಿಕೊಟ್ಟಿದ್ದು ಇವೆಲ್ಲವುಗಳ ವಿರುದ್ಧ ರೈತ ಚಳವಳಿ ಶೀಘ್ರದಲ್ಲೇ ಆರಂಭಗೊಳ್ಳಲಿದೆ ಎಂದು ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಅಬ್ಬಣಿ ಶಿವಪ್ಪ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News