ಕೋಲಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾರಾಮಾರಿ
ಕೋಲಾರ : ʼಫ್ಲೆಕ್ಸ್ ನಲ್ಲಿ ತಮ್ಮ ನಾಯಕರ ಭಾವಚಿತ್ರ ಹಾಕಿಲ್ಲʼ ಅನ್ನೋ ಕಾರಣಕ್ಕೆ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಬೆಂಬಲಿಗ ಹಾಗೂ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್ ಮೇಲೆ ಶಾಸಕ ಕೊತ್ತೂರು ಮಂಜುನಾಥ್ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ. ಪರಿಣಾಮ ಕೋಲಾರ ಕಾಂಗ್ರೆಸ್ ಕಚೇರಿಯಲ್ಲಿ ಕರೆಯಲಾಗಿದ್ದ ಬೂತ್ ಲೆವೆಲ್ ಏಜೆಂಟ್ ಸಭೆ ಎರಡು ಗುಂಪುಗಳ ಮಧ್ಯೆ ನಡೆದ ಮಾರಾಮಾರಿಯಿಂದ ಅಕ್ಷರಶಃ ಗೊಂದಲಕ್ಕೀಡಾಗಿಯಿತು.
ಮಂಗಳವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕರೆಯಲಾಗಿದ್ದ ಬೂತ್ ಲೆವೆಲ್ ಏಜೆಂಟ್ ಸಭೆಯಲ್ಲಿ ಹಾಕಲಾಗಿದ್ದ ಫ್ಲಕ್ಸ್ ನಲ್ಲಿ ತಮ್ಮ ನಾಯಕರ ಭಾವಚಿತ್ರ ಇಲ್ಲ ಎನ್ನುವುದನ್ನೇ ಕಾರಣವಾಗಿಸಿಕೊಂಡು ಮಾಜಿ ಕೇಂದ್ರ ಸಚಿವ ಕೆ.ೆಚ್.ಮುನಿಯಪ್ಪ ಬೆಂಬಲಿಗ ಹಾಗೂ ಕಾಂಗ್ರೆಸ್ ಪಕ್ಷದ ಜಿಲ್ಲಾ ಕಾರ್ಯಾಧ್ಯಕ್ಷ ಊರುಬಾಗಲು ಶ್ರೀನಿವಾಸ್ ಮೇಲೆ ಹಲ್ಲೆ ನಡೆಸಲಾಯಿತು. ವೇದಿಕೆಯಲ್ಲಿ ಕುಳಿತಿದ್ದ ಶ್ರೀನಿವಾಸ್ ಅವರ ಬಳಿಗೆ ದಾವಿಸಿದ ಶಾಸಕ ಕೊತ್ತೂರು ಮಂಜುನಾಥ್ ಬೆಂಬಲಿಗ ಶಿವಕುಮಾರ್ ಏಕಾ ಏಕಿ ಶ್ರೀನಿವಾಸ್ ಅವರ ಅಂಗಿಯನ್ನು ಹಿಡಿದು ಎಳೆದಾಡಿದರಲ್ಲದೆ ಹಣೆಗೆ ಡಿಚ್ಚಿ ಹೊಡೆದ ಘಟನೆ ಸಭೆಯಲ್ಲಿ ಎರಡು ಗುಂಪುಗಳ ಮಧ್ಯೆ ತಳ್ಳಾಟ ನೂಕಾಟ ಜೊತೆಗೆ ಮಾರಾಮಾರಿಗೆ ಕಾರಣವಾಯಿತು ಎಂದು ತಿಳಿದು ಬಂದಿದೆ.
ಕೋಲಾರ ಡಿಸಿಸಿ ಬ್ಯಾಂಕ್ ಬಳಿ ಇರುವ ಕೋಲಾರ ಜಿಲ್ಲಾ ಕಾಂಗ್ರೇಸ್ ಕಚೇರಿಯಲ್ಲಿ ಲೋಕಸಭೆ ಚುನಾವಣೆ ಉಸ್ತುವಾರಿಗಳಾದ ಪಿ.ಆರ್.ರಮೇಶ್ ಹಾಗೂ ರಾಜ್‍ಕುಮಾರ್ ನೇತೃತ್ವದಲ್ಲಿ ಬೂತ್ ಮಟ್ಟದ ಏಜೆಂಟರ ಸಭೆಯನ್ನು ಕರೆಯಲಾಗಿತ್ತು. ಸಭೆಯಲ್ಲಿ ಕಾಂಗ್ರೇಸ್ ಬಹುತೇಕ ಮುಖಂಡರು ಭಾಗವಹಿಸಿದ್ದರು. ಆದರೆ ಸಭೆ ಆರಂಭವಾಗುತ್ತಿದ್ದಂತೆ ಸಿಎಂ ರಾಜಕೀಯ ಕಾರ್ಯದರ್ಶಿ ನಸಿರ್ ಅಹ್ಮದ್, ಮಾಜಿ ಶಾಸಕ ರಮೇಶ್ ಕುಮಾರ್, ಶಾಸಕ ಕೊತ್ತೂರು ಮಂಜುನಾಥ್ ಬೆಂಬಲಿಗರು ನಮ್ಮ ನಾಯಕರ ಫೋಟೊವನ್ನ ಫ್ಲೆಕ್ಸ್ ನಲ್ಲಿ ಹಾಕಿಲ್ಲ ಅನ್ನೋ ಕಾರಣಕ್ಕೆ, ಹಾಗೂ ಕಳೆದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಪರವಾಗಿ ಚುನಾವಣೆ ಮಾಡಿದವರನ್ನು ವೇದಿಕೆಯಲ್ಲಿ ಕೂರಿಸಲಾಗಿದೆ ಎಂದು ನಗರಸಭೆ ಸದಸ್ಯ ಅಂಬರೀಶ್ ತಗಾದೆ ತೆಗೆದರು ಎನ್ನಲಾಗಿದೆ.
ಈ ವೇಳೆ ಮುನಿಯಪ್ಪ ಬೆಂಬಲಿಗ ಊರುಬಾಗಲು ಶ್ರೀನಿವಾಸ ಮೇಲೆ ಶಾಸಕ ಕೊತ್ತೂರು ಮಂಜುನಾಥ್ ಬೆಂಬಲಿಗರಾದ ವೈ.ಶಿವಕುಮಾರ್, ಅಪ್ಸರ್, ಮುರಳಿ, ಹಲ್ಲೆ ನಡೆಸಿದರು. ಗಲಾಟೆ ಜೋರಾಗಿ ಕೈ ಕೈ ಮಿಲಾಯಿಸಿದ ಎರಡು ಗುಂಪುಗಳ ನಾಯಕರು ಪರಸ್ಪರ ಬಡಿದಾಡಿಕೊಂಡು ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದು ಸಭೆಯಲ್ಲಿದ್ದ ಕಾರ್ಯಕರ್ತರು ಚೆಲ್ಲಾಪಿಲ್ಲಿಯಾದರು. ಆ ತಕ್ಷಣ ಕಚೇರಿಯ ಕುರ್ಚಿ ಗಳು, ಫ್ಲೆಕ್ಸ್ ನ್ನು ತೆರವುಗೊಳಿಸಲಾಯಿತು. ಇದೇ ವೇಳೆ ಸಭೆಯಿಂದ ಹೊರ ನಡೆದ ಹಲ್ಲೆಗೊಳಗಾದ ಊರುಬಾಗಲು ಶ್ರೀನಿವಾಸ್ ಖಾಸಗಿ ಆಸ್ಪತ್ರೆಗೆ ದಾಖಲಾದರು ಎಂದು ತಿಳಿದು ಬಂದಿದೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಊರುಬಾಗಿಲು ಶ್ರೀನಿವಾಸ್, ಮಾದ್ಯಮದವರೊಂದಿಗೆ ಮಾತನಾಡಿ, ಶಾಸಕ ಕೊತ್ತೂರು ಮಂಜುನಾಥ್ ಬೆಂಬಲಿಗರು ನನ್ನ ಮೇಲೆ ಉದ್ದೇಶಪೂರ್ವಕವಾಗಿ ಹಲ್ಲೆ ನಡೆಸಿದ್ದಾರೆ. ಇದು ಮೊದಲೇ ಪೂರ್ವ ನಿಯೋಜಿತವಾಗಿದ್ದು, ಬ್ಯಾನರ್ ನೆಪದಲ್ಲಿ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿರುವ ವಿಷಯ ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಗಮನಕ್ಕೆ ಬಂದಿದೆ. ಈ ಬಗ್ಗೆ ಶಿಸ್ತುಕ್ರಮ ತೆಗೆದುಕೊಳ್ಳದಿದ್ದರೆ ಪಕ್ಷಕ್ಕೆ ಹೊಸದಾಗಿ ಕಾರ್ಯಕರ್ತರು ಯಾವ ಭರವಸೆಯ ಆಧಾರದಲ್ಲಿ ಬರುತ್ತಾರೆ ಎಂದು ಪ್ರಶ್ನಿಸಿದ ಶ್ರೀನಿವಾಸ್ ಇದನ್ನು ಹೀಗೆ ಬೆಳೆಯಲು ಬಿಟ್ಟರೆ ಕೆಪಿಸಿಸಿ ಕಚೇರಿ ಮುಂದೆ ಧರಣಿ ಕೂರುತ್ತೇನೆ ಎಂದು ಎಚ್ಚರಿಸಿದರು.