ದಲಿತ ವಿದ್ಯಾರ್ಥಿಗಳನ್ನು ಶೌಚ ಗುಂಡಿಗೆ ಇಳಿಸಿ ಸ್ವಚ್ಛತೆ: ಮಾಲೂರಿನ ಮೊರಾರ್ಜಿ ವಸತಿ ಶಾಲೆಯಲ್ಲಿ ಅಮಾನವೀಯ ಘಟನೆ

ಶಾಲಾ ವಿದ್ಯಾರ್ಥಿಗಳನ್ನು ಮಲದ ಗುಂಡಿಗೆ ಇಳಿಸಿ ಸ್ವಚ್ಛಗೊಳಿಸಿರುವ ಅಮಾನವೀಯ ಘಟನೆ ಕೋಲಾರದ ಮಾಲೂರು ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದಿದೆ.

Update: 2023-12-17 08:43 GMT

ಕೋಲಾರ, ಡಿ.17: ಶಾಲಾ ವಿದ್ಯಾರ್ಥಿಗಳನ್ನು ಮಲದ ಗುಂಡಿಗೆ ಇಳಿಸಿ ಸ್ವಚ್ಛಗೊಳಿಸಿರುವ ಅಮಾನವೀಯ ಘಟನೆ ಕೋಲಾರದ ಮಾಲೂರು ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯೊಂದರಲ್ಲಿ ನಡೆದಿರುವುದು ವರದಿಯಾಗಿದೆ.

ಮಾಲೂರು ತಾಲೂಕಿನ ಯಲುವಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳನ್ನು ಮಲದ ಗುಂಡಿಯೊಳಗೆ ಇಳಿಸಿ ಸ್ವಚ್ಛಗೊಳಿಸಲಾಗಿದೆ. ಗುಂಡಿಗೆ ಇಳಿಸಿದ ಎಲ್ಲಾ ಮಕ್ಕಳೂ ಪರಿಶಿಷ್ಟ ಸಮುದಾಯಕ್ಕೆ ಸೇರಿದವರು ಎಂದು ತಿಳಿದು ಬಂದಿದೆ.

ಈ ನಡುವೆ‘ಅದು ಮಲದ ಗುಂಡಿ ಅಲ್ಲ; ಸ್ವಚ್ಛತಾ ಅಂದೋಲನ ಅಂಗವಾಗಿ ಚೇಂಬರ್ ಒಳಗೆ ಇಳಿಸಿ ಸ್ವಚ್ಛಗೊಳಿಸಲಾಗಿದೆ' ಎಂದು ಅಧಿಕಾರಿಗಳು ಸಮಜಾಯಿಷಿ ನೀಡಿದ್ದಾರೆ. ಆದರೆ ‘ಅದು ಮಲದ ಗುಂಡಿ’ ಎಂದು ಅಲ್ಲಿನ ಶಿಕ್ಷಕರೊಬ್ಬರು ಖಚಿತಪಡಿಸಿದ್ದಾರೆ.

3-4 ದಿನಗಳ ಹಿಂದೆ ಪ್ರಾಂಶುಪಾಲರು ಹಾಗೂ ಶಿಕ್ಷಕರೊಬ್ಬರ ಸಮ್ಮುಖದಲ್ಲಿ ಏಳರಿಂದ ಒಂಭತ್ತನೇ ತರಗತಿಯ ಐದಾರು ಮಕ್ಕಳನ್ನು ಮಲದ ಗುಂಡಿಯೊಳಗೆ ಇಳಿಸಿ ಸ್ವಚ್ಛಗೊಳಿಸಲು ಇಳಿಸಲಾಗಿದೆ ಎಂದು ತಿಳಿದುಬಂದಿದೆ.

ವಿಪರೀತ ಹಿಂಸೆ ಕೊಡುತ್ತಾರೆ

‘ಮಲದ ಪಿಟ್ನೊಳಗೆ ಇಳಿಸಿ ಕಸ ತೆಗೆಸಿದರು. ನಾವು ಬಕೆಟ್ನಲ್ಲಿ ಕಸ ತುಂಬಿ ಕೊಟ್ಟೆವು. ಕೆಲವರು ಮೇಲಿಂದ ನೀರು ಹಾಕಿದರು. ಐದಾರು ಮಕ್ಕಳು ಇದ್ದೆವು. ವಿಪರೀತ ಹಿಂಸೆ ಕೊಡುತ್ತಾರೆ. ಇಲ್ಲಿ ಇರುವುದೇ ಬೇಡ ಅನಿಸುತ್ತಿದೆ’ ಎಂದು ಮಕ್ಕಳು ವೀಡಿಯೊದಲ್ಲಿ ನೋವು ತೋಡಿಕೊಂಡಿದ್ದಾರೆ.

ಮಕ್ಕಳು ಗುಂಡಿಯೊಳಗಿರುವ ಫೋಟೊಗಳನ್ನು ಶಾಲೆಯ ಶಿಕ್ಷಕರೊಬ್ಬರು ಮೊಬೈಲ್ ಫೋನ್ ನಲ್ಲಿ ಸೆರೆ ಹಿಡಿದಿದ್ದಲ್ಲದೆ, ಮಕ್ಕಳನ್ನು ಮಾತನಾಡಿಸಿದ್ದು, ಅದರ ವೀಡಿಯೊ ಇದೀಗ ವೈರಲ್ ಆಗಿದೆ.

‘ರಾತ್ರಿ ಲೈಟ್ ಆಫ್ ಮಾಡಿ ಬ್ಯಾಗ್ ಸಮೇತ ಹಾಸ್ಟೆಲ್ ಹೊರಗಡೆ ಮಂಡಿಯೂರಿ ಕೂರಿಸಿ ಶಿಕ್ಷೆ ಕೊಡುತ್ತಾರೆ. ಸುಸ್ತಾಗುತ್ತಿದೆ ಎಂದರೂ ಕೇಳಲ್ಲ’ ಎಂದು ವಿದ್ಯಾರ್ಥಿಗಳು ದೂರು ನೀಡಿದ್ದಾರೆ. ಮಕ್ಕಳಿಗೆ ತರಗತಿಯಲ್ಲಿ ಹೊಡೆಯುತ್ತಿರುವ ದೃಶ್ಯ ಸಿ.ಸಿ.ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಈ ವಸತಿ ಶಾಲೆಯಲ್ಲಿ 6ರಿಂದ 10ನೇ ತರಗತಿಯ 250 ಮಕ್ಕಳು ಇದ್ದಾರೆ. ಪ್ರಾಂಶುಪಾಲರು, ಶಿಕ್ಷಕರು, ವಾರ್ಡನ್ ಗಳಿಗೆ ಅಲ್ಲಿಯೇ ವಸತಿ ವ್ಯವಸ್ಥೆ ಇದೆ.

ಚಳವಳಿಗಳ ತವರೂರು ಕೋಲಾರ ಜಿಲ್ಲೆಯಲ್ಲಿ ದಲಿತ ಮಕ್ಕಳನ್ನು ಮಲದ ಗುಂಡಿಗೆ ಇಳಿಸಿ, ಅಬಾಲಿಶನ್ ಆಫ್ ಮ್ಯಾನುವಲ್ ಸ್ಕ್ಯಾವೆಂಜಿಂಗ್ ಆ್ಯಕ್ಟ್-1993(abolition of manual scavenging act 1993)ರ ಉಲ್ಲಂಘನೆ ಆಗಿದ್ದರೂ ಈ ಬಗ್ಗೆ ಇನ್ನೂ ಪ್ರಕರಣ ದಾಖಲು ಮಾಡಿಲ್ಲ ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

---------

ಮಾಹಿತಿ ಬಂದ ಕೂಡಲೇ ವಸತಿ ನಿಲಯಕ್ಕೆ ತೆರಳಿ ಪರಿಶೀಲನೆ ನಡೆಸಿದ್ದೇನೆ. ಮಕ್ಕಳನ್ನು ಈ ಕೆಲಸಕ್ಕೆ ಬಳಸಿಕೊಂಡಿರುವುದು ತಪ್ಪು. ಈ ಸಂಬಂಧಪಟ್ಟ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಿಗೆ ವರದಿ ನೀಡಿದ್ದೇನೆ. ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗಿದೆ ಹಾಗೂ ಮಕ್ಕಳಿಗೂ ಜಾಗೃತಿ ಮೂಡಿಸಿದ್ದೇವೆ.

- ನಾಗರತ್ನಾ

ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ

---------

ಈ ವಿಷಯ ತಿಳಿಯುತ್ತಲೇ ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಮಲದ ಗುಂಡಿಗೆ ಮಕ್ಕಳನ್ನು ಇಳಿಸಿ ಅದರಲ್ಲಿದ್ದ ಕಸ ಕಡ್ಡಿ ತೆಗೆಯಿಸಿದ್ದಾರೆ. ಮಕ್ಕಳಿಂದ ಈ ಕೆಲಸ ಮಾಡಿಸದಂತೆ ಪ್ರಾಂಶುಪಾಲರು, ಶಿಕ್ಷಕರಿಗೆ ಸೂಚನೆ ನೀಡಿದ್ದೇನೆ. ಮಕ್ಕಳನ್ನು ಛೇಂಬರ್ ಒಳಗೆ ಇಳಿಸಿದವರು ಮತ್ತು ಮಕ್ಕಳಿಗೆ ರಾತ್ರಿ ವೇಳೆ ಹಿಂಸೆ ನೀಡಿರುವ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಮೇಲಧಿಕಾರಿಗಳಿಗೆ ಪತ್ರ ಬರೆದಿದ್ದೇನೆ

- ಆರ್.ಶ್ರೀನಿವಾಸ್, ಜಂಟಿ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಕೋಲಾರ





Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News