ಪ್ರಧಾನಿ ಮೋದಿ ರಾಜ್ಯಕ್ಕೆ ನೀಡಿದ ಖಾಲಿ ಚೊಂಬನ್ನು ಕೋಲಾರದ ಜೆಡಿಎಸ್ ಅಭ್ಯರ್ಥಿ ಕೈಗೆ ಕೊಟ್ಟು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ: ಮತದಾರರಿಗೆ ಸಿಎಂ ಸಿದ್ದರಾಮಯ್ಯ ಕರೆ

Update: 2024-04-21 17:35 GMT

ಕೋಲಾರ: ಮೋದಿಯವರು ರಾಜ್ಯಕ್ಕೆ ನೀಡಿದ ಖಾಲಿ ಚೊಂಬನ್ನು ಕೋಲಾರದ ಜೆಡಿಎಸ್ ಅಭ್ಯರ್ಥಿ ಕೈಗೆ ಕೊಟ್ಟು ಕಾಂಗ್ರೆಸ್ ಅಭ್ಯರ್ಥಿ ಗೌತಮ್ ರನ್ನು ಗೆಲ್ಲಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ. ಕೋಲಾರ ಲೋಕಸಭಾ ಕ್ಷೇತ್ರದ ಬಂಗಾರಪೇಟೆ ಪಟ್ಟಣದಲ್ಲಿ ರೋಡ್ ಶೋ ನಡೆಸಿದ ವೇಳೆ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.

ಚಿಕ್ಕಬಳ್ಳಾಪುರದಲ್ಲಿ ಹಾಲಿ ಪ್ರಧಾನಿ ಮೋದಿ,ಮಾಜಿ ಪ್ರಧಾನಿ ದೇವೇಗೌಡರು ಒಟ್ಟಾಗಿ ಜಿಲ್ಲೆಯ ಜನತೆಗೆ ಜೋಡಿ ಸುಳ್ಳುಗಳನ್ನು ಹೇಳಿ ಹೋಗಿದ್ದಾರೆ, ಮೋದಿ ಕೊಟ್ಟ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಎಂದು ದೇವೇಗೌಡರು ರೈಲು ಬಿಟ್ಟಿದ್ದಾರೆ. ಖಾಲಿ ಚೊಂಬು ನಿಮ್ಮ ಕಣ್ಣಿಗೆ ಅಕ್ಷಯ ಪಾತ್ರೆಯಂತೆ ಕಾಣಿಸಿದರೆ ರಾಜ್ಯದ ಪಾಲಿನ ತೆರಿಗೆ ಹಣ ವಾಪಾಸ್ ಯಾಕೆ ಬರ್ಲಿಲ್ಲ? ಬರಗಾಲದ ಅನುದಾನ ಏಕೆ ಬರಲಿಲ್ಲ? ಪ್ರವಾಹದ ವೇಳೆ ರಾಜ್ಯದ ಅನುದಾನ ಏಕೆ ಬರಲಿಲ್ಲ ಎಂದು ಪ್ರಶ್ನಿಸಿದರು.

ಮೋದಿಯವರ ಚೊಂಬು ನಿಮಗೆ ಅಕ್ಷಯ ಪಾತ್ರೆಯಂತೆ ಕಾಣಿಸಿದ್ರೆ, ರಾಜ್ಯದ ರೈತರ ಸಾಲ ಏಕೆ ಮನ್ನಾ ಮಾಡುತ್ತಿಲ್ಲ? ಮೋದಿಯವರ ಚೊಂಬು ನಿಮಗೆ ಅಕ್ಷಯ ಪಾತ್ರೆಯಂತೆ ಕಾಣಿಸಿದ್ರೆ, ಮೋದಿಯವರೇಕೆ ರಾಜ್ಯದ ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುತ್ತಿಲ್ಲ? ಮೋದಿಯವರ ಚೊಂಬು ಅತ್ಯಂತ ಶ್ರೀಮಂತರ, ಉದ್ಯಮಿಗಳ ಲಕ್ಷ ಲಕ್ಷ ಕೋಟಿ ಸಾಲ ಮನ್ನಾ ಮಾಡಿದರು. ಇದು ಅತೀ ಶ್ರೀಮಂತರ ಅಕ್ಷಯ ಪಾತ್ರೆ. ಭಾರತೀಯರ ಪಾಲಿಗೆ, ನಾಡಿನ ಜನರ ಪಾಲಿಗೆ ಖಾಲಿ ಚೊಂಬು ಅಷ್ಟೆ ಅಲ್ವಾ ದೇವೇಗೌಡರೇ ಎಂದು ಹೇಳಿದರು.

ಹದಿನೈದನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಮಾಡಿದ ಮೋಸವನ್ನು ಮೋದಿಯವರ ಖಾಲಿ ಚೊಂಬು ಸಾಕ್ಷಿಯಾಗಿದೆ. ದೇವೇಗೌಡರೇ ಈ ಚೊಂಬು ನಿಮ್ಮ ಕಣ್ಣಿಗೆ ಅಕ್ಷಯ ಪಾತ್ರೆಯಾಗಿದ್ದರೆ 15 ನೇ ಹಣಕಾಸು ಆಯೋಗದಲ್ಲಿ‌ ಆಗಿರುವ ನಷ್ಟ, ಅನ್ಯಾಯವನ್ನು ತುಂಬಿ ಕೊಡಿಸಿ. ಅಕ್ಷಯ ಪಾತ್ರೆಯಿಂದ ಉದುರಿಸಿ ನೋಡೋಣ ಎಂದು ಸವಾಲು ಹಾಕಿದರು.

ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುತ್ತೀನಿ ಎಂದಿದ್ದ ದೇವೇಗೌಡರು, ಮೋದಿ ಪ್ರಧಾನಿ ಆದರೆ ದೇಶ ಬಿಟ್ಟು ಹೋಗುವುದಾಗಿ ಘೋಷಿಸಿದ್ದ ದೇವೇಗೌಡರು ಈಗ ಮೋದಿ ಮತ್ತು ತಾವು ಭಾಯಿ ಭಾಯಿ ಎನ್ನುತ್ತಿದ್ದಾರೆ. ಕೋಲಾರದಲ್ಲಿ ದೇವೇಗೌಡರು ಮತ್ತು ಮೋದಿಯವರ ಖಾಲಿ ಚೊಂಬನ್ನು ಸೋಲಿಸಿ ನಮ್ಮ ಗ್ಯಾರಂಟಿಗಳಿಗೆ ಆಶೀರ್ವದಿಸುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಗೌತಮ್ ಅವರನ್ನು ಗೆಲ್ಲಿಸಿ ಎಂದು ಕರೆ ನೀಡಿದರು.

ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಗೌತಮ್ ಗೆಲುವು ನಿಶ್ಚಿತವಾಗಿದೆ. ಬಂಗಾರಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚು ಬಹುಮತ ನೀಡಿ ಶಾಸಕ ನಾರಾಯಣಸ್ವಾಮಿ ಯವರಿಗೆ ಹೆಚ್ಚಿನ ಶಕ್ತಿ ನೀಡಿ ಎಂದು ಮನವಿ ಮಾಡಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News