ಕೋಲಾರ : ಮದುವೆಯಾದ ಕೆಲವೇ ಗಂಟೆಗಳಲ್ಲಿ ಹೊಡೆದಾಡಿಕೊಂಡ ನವದಂಪತಿ ; ಪತ್ನಿ ಮೃತ್ಯು, ಪತಿ ಗಂಭೀರ
ಕೋಲಾರ : ಮದುವೆಯಾದ ಕೆಲವೇ ಗಂಟೆಗಳಲ್ಲಿ ನವದಂಪತಿ ಹೊಡೆದಾಡಿಕೊಂಡಿದ್ದು, ಗಾಯಗೊಂಡಿದ್ದ ವಧು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಚಂಬರಸನ ಹಳ್ಳಿಯಲ್ಲಿ ನಡೆದಿದೆ.
ವಧು ಲಿಖಿತ ಶ್ರೀ ಹಾಗೂ ನವೀನ್ ಆಗಸ್ಟ್ 07 ರಂದು ಸಪ್ತಪದಿ ತುಳಿದಿದ್ದಾರೆ. ಆದರೆ ಕೋಣೆಗೆ ತೆರಳದ ನವ ದಂಪತಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ ಎನ್ನಲಾಗಿದೆ. ಪರಿಣಾಮ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ಇಬ್ಬರನ್ನು ಕೆಜಿಎಫ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರವಾಗಿ ಗಾಯಗೊಂಡಿದ್ದ ವಧು ಲಿಖಿತ ಶ್ರೀ ಸಾವನ್ನಪ್ಪಿದ್ದಾಳೆ. ವರ ನವೀನ್ ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಆಸ್ಪತ್ರೆಗೆ ರವಾನಿಸಲಾಗಿದೆ.
ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕಿನ ಚಂಬರಸನಹಳ್ಳಿ ಗ್ರಾಮದ ನವೀನ್ ಕೆಲವು ವರ್ಷಗಳಿಂದ ಆಂಧ್ರ ಪ್ರದೇಶದ ಬೈನಪಲ್ಲಿ ಗ್ರಾಮದ ಲಿಖಿತ ಶ್ರೀಯನ್ನು ಪ್ರೀತಿಸುತ್ತಿದ್ದ. ಇಬ್ಬರೂ ಸೇರಿ ಕಷ್ಟಪಟ್ಟು ಮನೆಯವರನ್ನು ಒಪ್ಪಿಸಿ ಗ್ರಾಮದಲ್ಲಿ ಸರಳವಾಗಿ ಮದುವೆಯನ್ನೂ ಮಾಡಿಕೊಂಡಿದ್ದಾರೆ. ಬೆಳಗ್ಗೆ ಮದುವೆಯಾದ ಜೋಡಿ ಎಲ್ಲ ಮದುವೆ ಶಾಸ್ತ್ರಗಳು ಮುಕ್ತಾಯಗೊಂಡ ನಂತರ ಕೋಣೆಗೆ ತೆರಳಿದ ಕೆಲ ಹೊತ್ತಿನ ನಂತರ ಹೊಡೆದಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಂಡರ್ ಸನ್ ಪೇಟೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.