ಕೋಲಾರ| ಮಹಿಳಾ ಪೊಲೀಸ್ ಅಪಹರಣ ಪ್ರಕರಣ: ಆರೋಪಿಗೆ 7 ವರ್ಷ ಶಿಕ್ಷೆ, 46 ಸಾವಿರ ರೂ. ದಂಡ
ಕೋಲಾರ: ಮಹಿಳಾ ಪೊಲೀಸ್ ಪೇದೆ ಅಪಹರಣ ಪ್ರಕರಣದಲ್ಲಿ ಪುರುಷ ಪೇದೆಗೆ 7 ವರ್ಷ ಶಿಕ್ಷೆ ಹಾಗೂ 46 ಸಾವಿರ ರೂ. ದಂಡವಿಧಿಸಿ ಇಲ್ಲಿನ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ತೀರ್ಪುನೀಡಿದೆ.
ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2017 ಸೆ.10 ರಂದು ಇದೇ ಠಾಣೆಗೆ ಪೊಲೀಸ್ ಪೇದೆ ಶ್ರೀಕಾಂತ್ ಎಂಬಾತ 26 ವರ್ಷದ ಮಹಿಳಾ ಪೊಲೀಸ್ ಪೇದೆಯನ್ನು ವಾಹನವೊಂದರಲ್ಲಿ ಅಪಹರಿಸಿದ್ದ.
ಈ ಬಗ್ಗೆ ಮಹಿಳಾ ಪೇದೆಯ ಅಣ್ಣ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ನ್ಯಾಯಾಲಯದಲ್ಲಿ ಸುಧೀರ್ಘ ವಾದ ವಿವಾದ ಹಾಗೂ 17 ಸಾಕ್ಷಿಗಳ ವಿಚಾರಣೆ ನಡೆದು ಆರೋಪಿ ಪೊಲೀಸ್ ಪೇದೆ ಶ್ರೀಕಾಂತ್ ಮೇಲಿರುವ ಆರೋಪ ಸಾಬೀತಾದ ಹಿನ್ನಲೆಯಲ್ಲಿ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲದ ನ್ಯಾಯಾಧೀಶರಾದ ಪಿ.ಕೆ.ದಿವ್ಯ ಅವರು ಆರೋಪಿಗೆ 7 ವರ್ಷ ಶಿಕ್ಷೆ ಹಾಗೂ 46 ಸಾವಿರ ರೂ. ದಂಡವಿಧಿಸಿ ಇದರಲ್ಲಿ 5 ಸಾವಿರ ರೂ. ಸರ್ಕಾರಕ್ಕೆ ಪಾವತಿಸುವಂತೆ ತೀರ್ಪು ನೀಡಿದ್ದಾರೆ.
ಸಂತ್ರಸ್ತೆ ಮಹಿಳಾ ಪೊಲೀಸ್ ಪೇದೆ ಪರವಾಗಿ ಸರ್ಕಾರಿ ಅಭಿಯೋಜಕಿ ಜ್ಯೋತಿಲಕ್ಷ್ಮಿ ಅವರು ವಾದ ಮಂಡಿಸಿದ್ದು, ಅಂದಿನ ವೃತ್ತ ನಿರೀಕ್ಷಕ ಸುಧಾಕರರೆಡ್ಡಿ ಅವರು ತನಿಖಾ ಅಧಿಕಾರಿಯಾಗಿದ್ದರು.