ಲೋಕಸಭಾ ಚುನಾವಣೆ : ಕೊನೆಗೂ ಕೋಲಾರಕ್ಕೆ ಅಭ್ಯರ್ಥಿಯನ್ನು ಘೋಷಿಸಿದ ಕಾಂಗ್ರೆಸ್
ಬೆಂಗಳೂರು: ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕಗ್ಗಂಟು ಬಗೆಹರಿಸುವಲ್ಲಿ ಯಶಸ್ವಿಯಾಗಿರುವ ಕಾಂಗ್ರೆಸ್ ಹೈಕಮಾಂಡ್, ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಹಾಗೂ ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಬಣಗಳ ನಡುವಿನ ಹಗ್ಗಜಗ್ಗಾಟಕ್ಕೆ ತೆರೆ ಎಳೆದಿದ್ದು, ಕೆ.ವಿ.ಗೌತಮ್ ಅವರಿಗೆ ಟಿಕೆಟ್ ಘೋಷಣೆ ಮಾಡಿದೆ.
ಕೆ.ಎಚ್.ಮುನಿಯಪ್ಪ ತಮ್ಮ ಅಳಿಯ ಚಿಕ್ಕಪೆದ್ದಣ್ಣ ಅವರಿಗೆ ಕಾಂಗ್ರೆಸ್ ಟಿಕೆಟ್ ಕೊಡಿಸಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜೊತೆ ಮಾತುಕತೆ ನಡೆಸಿದ್ದರು. ಆದರೆ, ಮುನಿಯಪ್ಪ ಕುಟುಂಬಕ್ಕೆ ಟಿಕೆಟ್ ನೀಡುವುದನ್ನು ಪ್ರತಿಭಟಿಸಿ ಕೋಲಾರ ಜಿಲ್ಲೆಯ ಕಾಂಗ್ರೆಸ್ ಶಾಸಕರು ಹಾಗೂ ಪರಿಷತ್ ಸದಸ್ಯರು ಸಾಮೂಹಿಕ ರಾಜೀನಾಮೆಗೆ ಮುಂದಾಗಿದ್ದರು.
ಚುನಾವಣೆ ಸಂದರ್ಭದಲ್ಲಿ ತಾರಕ್ಕಕ್ಕೆ ಏರುತ್ತಿರುವ ಈ ಬಣ ರಾಜಕೀಯವನ್ನು ತಣ್ಣಗಾಗಿಸಲು, ಎರಡೂ ಬಣಗಳನ್ನು ಹೊರತುಪಡಿಸಿ, ಮೂರನೆ ವ್ಯಕ್ತಿಗೆ ಹೈಕಮಾಂಡ್ ಮಣೆ ಹಾಕಿದೆ. ಅಲ್ಲದೆ, ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿಯನ್ನು ಎರಡೂ ಬಣಗಳ ಪ್ರಮುಖರಿಗೆ ನೀಡಿದೆ.
ಯಾರು ಈ ಕೆ.ವಿ.ಗೌತಮ್?: ಕೋಲಾರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಕೆ.ವಿ.ಗೌತಮ್ ಮೂಲತಃ ಬೆಂಗಳೂರಿನವರು. ಎನ್‍ಎಸ್‍ಯುಐ ಮೂಲಕ ಕಾಂಗ್ರೆಸ್ ಪ್ರವೇಶ ಮಾಡಿದ ಗೌತಮ್, ಎನ್‍ಎಸ್‍ಯುಐ ಬೆಂಗಳೂರು ನಗರ ಕಾರ್ಯದರ್ಶಿಯಾಗಿದ್ದರು. ಮಾದಿಗ(ಎಡಗೈ) ಸಮುದಾಯಕ್ಕೆ ಸೇರಿದವರು. ಅಲ್ಲದೆ, ಬೆಂಗಳೂರು ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕೆಪಿಸಿಸಿ ಪದಾಧಿಕಾರಿಯಾಗಿಯೂ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.
ಗೆದ್ದು ತೋರಿಸುತ್ತೇನೆ: ‘ಪಕ್ಷದ ವರಿಷ್ಠರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಅನಿರೀಕ್ಷಿತವಾಗಿ ನನಗೆ ಕೊಟ್ಟ ಅವಕಾಶವನ್ನು ಬೇಡ ಎನ್ನುವುದಕ್ಕೆ ಆಗಲಿಲ್ಲ. ಇದು ಒಳ್ಳೆಯ ಅವಕಾಶ. ಚುನಾವಣೆಯಲ್ಲಿ ಗೆದ್ದು ತೋರಿಸುತ್ತೇನೆ. ಜಿಲ್ಲಾ ಕಾಂಗ್ರೆಸ್‍ನಲ್ಲಿ ವೈಮನಸ್ಸು ಇರುವುದು ಸತ್ಯ, ಅದನ್ನು ಮುಚ್ಚಿಡಲು ಸಾಧ್ಯವಿಲ್ಲ. ಆದರೆ, ನನಗೆ ಯಾರೂ ವಿರೋಧ ಮಾಡುವುದಿಲ್ಲ. ರಮೇಶ್‍ಕುಮಾರ್ ಹಾಗೂ ಕೆ.ಎಚ್.ಮುನಿಯಪ್ಪ ಇಬ್ಬರ ಜೊತೆಗೂ ಒಡನಾಟವಿದೆ. ಎಲ್ಲರೂ ನನ್ನ ಪರ ಕೆಲಸ ಮಾಡಲಿದ್ದು, ಕೋಲಾರ ಕ್ಷೇತ್ರದಲ್ಲಿ ಕಾಂಗ್ರೆಸ್ ನೂರಕ್ಕೆ ನೂರು ಗೆಲ್ಲಲಿದೆ’
ಕೆ.ವಿ.ಗೌತಮ್ ಕೋಲಾರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ