ಕೋಲಾರ| ರಾಮ ಮಂದಿರ ಉದ್ಘಾಟನೆ ಹಿನ್ನೆಲೆ: ಜಿಲ್ಲಾದ್ಯಂತ ಬಿಗಿ ಪೊಲೀಸ್ ಭದ್ರತೆ

Update: 2024-01-21 16:25 GMT

ಕೋಲಾರ : ಜನವರಿ 22ಕ್ಕೆ ಅಯೋಧ್ಯೆಯ ರಾಮ ಮಂದಿರದಲ್ಲಿ ವಿಗ್ರಹ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ನಗರದಲ್ಲಿ ಶಾಂತಿ ಕಾಯ್ದುಕೊಳ್ಳಲು ಕೋಲಾರ ಜಿಲ್ಲಾ ಪೊಲೀಸ್ ವತಿಯಿಂದ ಬಿಗಿ ಭದ್ರತೆ ಮಾಡಿಕೊಳ್ಳಲಾಗಿದೆ.

ಮುಳಬಾಗಿಲು ನಗರ ಹಾಗೂ ಮಾಲೂರು ಪಟ್ಟಣದಲ್ಲಿ ಇತ್ತೀಚೆಗೆ ನಡೆದ ಕೆಲವು ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಇಡೀ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಸಾರ್ವಜನಿಕರಿಗೆ ಧೈರ್ಯ ತುಂಬುವ ಸಲುವಾಗಿ ಬಂಗಾರಪೇಟೆ ವೃತ್ತ, ಡೂಂ ಲೈಟ್ ವೃತ್ತ, ಟೇಕಲ್ ವೃತ್ತ, ಕ್ಲಾಕ್ ಟವರ್, ಬೆಂಗಳೂರು ರಸ್ತೆ ಸೇರಿದಂತೆ ನಗರದ ವಿವಿಧ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಹಾಗೂ ಕಮಾಂಡೋಗಳು ಪಥ ಸಂಚಲನ ನಡೆಸಿದರು.

ಪಥಸಂಚಲನದ ಹಿಂದೆ ಪೊಲೀಸ್ ವಾಹನದ ಧ್ವನಿವರ್ಧಕದಲ್ಲಿ ನಗರದಲ್ಲಿ ಎಲ್ಲಾ ಪ್ರಜೆಗಳು ಶಾಂತಿಯಿಂದ ಇರಬೇಕು. ಸಮಾಜಘಾತುಕ ಶಕ್ತಿಗಳಿಗೆ ಸಹಾಯ ಮಾಡಬಾರದು. ಯಾವುದೇ ಸಮಾಜಘಾತುಕ ಚಟುವಟಿಕೆಗಳಲ್ಲಿ ಭಾಗವಹಿಸಬಾರದು ಎಂದು ಜಾಗೃತಿ ಮೂಡಿಸಿದರು.

ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಆತ್ಮವಿಶ್ವಾಸ ಮೂಡಿಸುವುದು,ಧೈರ್ಯ ತುಂಬುವುದು ಪಥಸಂಚಲನ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಕಮಾಂಡೋಗಳು, ಮಹಿಳಾ ಪೊಲೀಸ್, ಹಾಗೂ ಗೃಹ ರಕ್ಷಕ ದಳದ 100 ಮಂದಿ ಭದ್ರತೆಗೆ ನಿಯೋಜಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ತಿಳಿಸಿದ್ದಾರೆ.

 

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News