ಸರ್ವಾಧಿಕಾರ ತೊಲಗಿಸಿ, ಸಂವಿಧಾನ ಉಳಿಸಿ: ಡಿ.ಕೆ. ಶಿವಕುಮಾರ್
ಕೋಲಾರ: ಸರ್ವಾಧಿಕಾರ ರಾಜಕಾರಣದ ಆಡಳಿತವನ್ನು ತೊಲಗಿಸಿ, ಸಂವಿಧಾನದ ಉಳಿವು ಹಾಗೂ ಪ್ರಜಾಪ್ರಭುತ್ವದ ರಕ್ಷಣೆಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕರೆ ನೀಡಿದರು.
ಕೋಲಾರದಲ್ಲಿ ಗುರುವಾರ ಕೋಲಾರ ಲೋಕಸಭಾ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ.ವಿ.ಗೌತಮ್ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೋಲಾರದಲ್ಲಿ ರೋಡ್ ಶೋ ನಡೆಸಿ ಅಭ್ಯರ್ಥಿ ಪರ ಮತಯಾಚಿಸಿದರು.
ಅಭ್ಯರ್ಥಿಯೊಂದಿಗೆ ಸಚಿವರು, ಶಾಸಕರು, ಮುಖಂಡರು ಜೊತೆ ಡಿ.ಕೆ.ಶಿವಕುಮಾರ್ ನಗರದ ಎಸ್.ಎನ್.ಆರ್. ವೃತ್ತದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಗಾಂಧಿ ವನದದವರೆಗೆ ರೋಡ್ತೆರೆದ ಶೋ ನಡೆಸಿದರು.
ಇದೇ ವೇಳೆ ಕಾರ್ಯಕರ್ತರು ಹಾಗೂ ಸಾರ್ವಜನಿಕರನ್ನು ಉದ್ದೇಶಿಸಿ ಅವರು ಮಾತನಾಡಿದರು . ಕೋಲಾರ ಜಿಲ್ಲೆಯ ಜನರು ಒಂದು ಕಾಲದಲ್ಲಿ ಚಿನ್ನ ಕೊಟ್ಟಿದ್ದರು. ಆನಂತರ ತರಕಾರಿ, ಹಾಲು ಕೊಡುತ್ತಿದ್ದೀರಿ. ಈಗ ನಮಗೆ ಹೊಸ ಅಭ್ಯರ್ಥಿಯನ್ನು ಸಂಸದರನ್ನಾಗಿ ಆಯ್ಕೆ ಮಾಡಿಕೊಡಿ ಎಂದು ಮನವಿ ಮಾಡಿದರು.
ಪಕ್ಷದ ಅಭ್ಯರ್ಥಿಯಾಗಿ ಹೊಸ ನಾಯಕ, ಸನ್ನಡೆತೆಯ ವಿದ್ಯಾವಂತ ಯುವಕ ಕೆ.ವಿ.ಗೌತಮ್ ಅವರನ್ನು ಮುಖ್ಯಮಂತ್ರಿ, ನಾನು ಕೆ.ಎಚ್.ಮುನಿಯಪ್ಪ, ಖರ್ಗೆ ಮತ್ತು ಜಿಲ್ಲೆಯ ಶಾಸಕರೊಂದಿಗೆ ಮಾತನಾಡಿ ತೀರ್ಮಾನ ಕೈಗೊಳ್ಳಲಾಗಿದ್ದು, ಗೌತಮ್ ಎಲ್ಲರ ಒಮ್ಮತದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ ಎಂದು ಹೇಳಿದರು.
ರಾಜ್ಯದ ಐದು ಪರಿಶಿಷ್ಟ ಜಾತಿ ಕ್ಷೇತ್ರಗಳಲ್ಲಿ ಮೂವರು ಬಲಗೈ ಅಭ್ಯರ್ಥಿಗಳನ್ನು ಹಾಗೂ ಇಬ್ಬರು ಎಡಗೈ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೇವೆ. ಈ ಮೂಲಕ ಸಾಮಾಜಿಕ ನ್ಯಾಯದ ಸಮತೋಲನ ಕಾಯ್ದುಕೊಂಡಿದ್ದೇವೆ ಸಂವಿಧಾನ, ಪ್ರಜಾಪ್ರಭುತ್ವ ಉಳಿಸಲು ಹಾಗೂ ಸರ್ವಾಧಿಕಾರ ತೊಲಗಿಸಲು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ ಎಂದ ಅವರು, ಕೋವಿಡ್ ಕಾಲದಲ್ಲಿ ಜನರ ನೆರವಿಗೆ ನಿಂತಿದ್ದೇ ಕಾಂಗ್ರೆಸ್ ಎಂದು ಅವರು ಹೇಳಿದರು.
ವಿಧಾನಸಭೆ ಚುನಾವಣೆಯಲ್ಲಿ ವೇಳೆ ನೀಡಿದ್ದ ಗ್ಯಾರಂಟಿ ಯೋಜನೆಗಳ ಭರವಸೆಯನ್ನು ನಾವು ಪೂರೈಸಿದ್ದೇವೆ. ಈ ಭಾಗದ ಜನರಿಗೆ ಕುಡಿಯುವ ನೀರು ಪೂರೈಸಲು ಎತ್ತಿನಹೊಳೆ ಯೋಜನೆ ಜಾರಿ ಮಾಡುತ್ತಿದ್ದೇವೆ. ಈಗಾಗಲೇ 15 ಸಾವಿರ ಕೋಟಿ ಖರ್ಚಾಗಿದೆ. ಕೆ.ಸಿ.ವ್ಯಾಲಿ ಮೂಲಕ ಅಂತರ್ಜಲ ಹೆಚ್ಚಿಸುವ ಕೆಲಸ ಮಾಡಿದ್ದೇವೆ. ಬಿಜೆಪಿಯಿಂದ ಏನಾದರೂ ಲಾಭವಾಗಿದೆಯೇ ತಮ್ಮ ಆದಾಯ ದ್ವಿಗುಣಗೊಂಡಿದೆಯಾ ನಿಮ್ಮ ಖಾತೆಗೆ ಹಣ ಬಂತಾ ಮೋದಿ ಗಾಳಿ ಇದೆಯಾ’ ಎಂದು ಅವರು ಪ್ರಶ್ನಿಸಿದರು.
ಕೋಲಾರದಲ್ಲಿ ತಮ್ಮ ಅಭ್ಯರ್ಥಿ ಗೌತಮ್ ಅಲ್ಲ. ಸಿದ್ದರಾಮಯ್ಯ, ನಾನು, ಖರ್ಗೆ ಅಭ್ಯರ್ಥಿ ಎಂದು ಭಾವಿಸಿ. ಇಲ್ಲಿನ ಜನರ ಸ್ವಾಭಿಮಾನವನ್ನು ಉಳಿಸಬೇಕು ಎಂದರು.
ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮ್ಮದ್, ಕೋಲಾರ ಕಾಂಗ್ರೆಸ್‌ನ ಭದ್ರಕೋಟೆ. 1952ರಿಂದ ಗೆಲ್ಲುತ್ತಾ ಬಂದಿದ್ದೇವೆ. ಕಳೆದ ಬಾರಿ ವ್ಯತ್ಯಾಸದಿಂದಾಗಿ ಸೋಲಾಯಿತು ಎಂದರು.
ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ ನಾವೆಲ್ಲಾ ಸೇರಿ ಗೌತಮ್ ಅವರನ್ನು ಗೆಲ್ಲಿಸಲು ಶಪಥ ಮಾಡಿದ್ದೇವೆ. ಬಿಸಿಲು ಇದ್ದರೂ ಜನ ಬಹಳ ಸಂಖ್ಯೆಯಲ್ಲಿ ಬಂದಿದ್ದಾರೆ. ಆದರೆ, ಮುಂದಿನ ದಿನಗಳಲ್ಲಿ ನಾವೇ ನಿಮ್ಮ ಮನೆ ಬಾಗಿಲಿಗೆ ಬರುತ್ತೇವೆ’ ಎಂದು ಹೇಳಿದರು.
ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮಾತನಾಡಿ, 'ಮಲ್ಲೇಶ್ ಬಾಬು ವಿರುದ್ಧ ಬಂಗಾರಪೇಟೆ ವಿಧಾನಸಭೆ ಕ್ಷೇತ್ರದಲ್ಲಿ ನಾನು ಎರಡು ಬಾರಿ ಗೆದ್ದಿದ್ದೇನೆ. ನೀವೆಲ್ಲಾ ಸೇರಿ ಮೂರನೇ ಬಾರಿ ಸೋಲಿಸಿ. ಶ್ರೀಮಂತ ಮಲ್ಲೇಶ್ ಬಾಬು ಬೇಕೋ, ಬಡವ ಗೌತಮ್ ಬೇಕೋ ನಿರ್ಧರಿಸಿ
ಕ್ಷೇತ್ರದಲ್ಲಿ ಬಲಗೈ ಸಮುದಾಯದ ಮತಗಳು ಹೆಚ್ಚು ಇದೆ. ಹೀಗಾಗಿಯೇ, ಅಭ್ಯರ್ಥಿ ಕೊಡಿ ಎಂದು ಕೋರಿದ್ದೆವು. ಆದರೆ, ಸಾಮಾಜಿಕ ನ್ಯಾಯದ ಪ್ರಕಾರ ಈಗ ಟಿಕೆಟ್ ಹಂಚಲಾಗಿದೆ ಎಂದರು.
ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ, ಕಳೆದ ಬಾರಿ ನಾವು ಜೆಡಿಎಸ್ ಜೊತೆ ಸೇರಿ ಯಾಮಾರಿದೆವು. ಕೇವಲ 1 ಸ್ಥಾನ ಪಡೆದೆವು. ಇದೇ ಗತಿ ಈ ಬಾರಿ ಬಿಜೆಪಿಗೆ ಬರಲಿದೆ ಎಂದು ನುಡಿದರು
ಬಳಿಕ ಡಿ.ಕೆ.ಶಿವಕುಮಾರ್ ಅವರು ಪ್ರಜಾಧ್ವನಿ ಬಸ್ ಏರಿ ಕಾಲೇಜು ವೃತ್ತ ತಲುಪಿ, ಅಲ್ಲಿನ ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು .
ಈ ಸಂದರ್ಭದಲ್ಲಿ ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್ತ, ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್, ಚಿಕ್ಕಬಳ್ಳಾಪುರ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್, ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಲಕ್ಷ್ಮಿನಾರಾಯಣ, ಶಿಡ್ಲಘಟ್ಟ ರಾಜೀವ್ ಗೌಡ, ಪುಟ್ಟು ಅಂಜಿನಪ್ಪ, ಕಾಂಗ್ರೆಸ್ ಮುಖಂಡರಾದ ಊರುಬಾಗಿಲು ಶ್ರೀನಿವಾಸ್, ಸೀಸಂದ್ರ ಗೋಪಾಲಗೌಡ, ಮೈಲಾಂಡಹಳ್ಳಿ ಮುರಳಿ, ಕೆ.ಜಯದೇವ್, ಆದಿನಾರಾಯಣ, ನಗರಸಭೆ ಸದಸ್ಯ ಅಂಬರೀಷ್, ಕುಡುವನಹಳ್ಳಿ ಆನಂದ್, ಕೋಟೆ ಶ್ರೀನಿವಾಸ್. ನಾಗೇಶ್, ನಗರಸಭೆ ಸದಸ್ಯ ಮುರಳಿಗೌಡ, ವಾಸು, ಇತರರು ಇದ್ದರು.