ಕೊಪ್ಪಳ | ಡಾ.ಅಂಬೇಡ್ಕರವರನ್ನು ಅವಮಾನಿಸಿದ ಗೃಹ ಮಂತ್ರಿ ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಿ ಮನವಿ

Update: 2024-12-26 14:14 GMT

ಕೊಪ್ಪಳ : ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಅವಮಾನಿಸಿದ ಕೇಂದ್ರ ಗೃಹ ಮಂತ್ರಿಗಳಾದ ಅಮಿತ್ ಶಾ ರವರು ರಾಜೀನಾಮೆ ನೀಡುವಂತೆ ಒತ್ತಾಯಿಸಿ ಜಿಲ್ಲಾ ಪಾಸ್ಟರ್ಸ್ ಅಸೋಸಿಯೇಷನ್ ನೇತ್ರತ್ವದಲ್ಲಿ ವಿವಿಧ ಸಂಘಟನೆಗಳ ನಾಯಕರು ಜಿಲ್ಲಾಧಿಕಾರಿ ಅವರ ಅನುಪಸ್ಥಿತಿಯಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಅವರ ಮುಖಾಂತರ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಿದರು.

ಮನವಿಯಲ್ಲಿ ʼಅಂಬೇಡ್ಕರ್ ಅವರ ಹೆಸರನ್ನು ಪದೇ ಪದೇ ಬಳಸುವುದು ಕೆಲವರಿಗೆ ಶೋಕಿಯಾಗಿಬಿಟ್ಟಿದೆ. ಅಂಬೇಡ್ಕರ್ ಅವರ ಹೆಸರನ್ನು ಬಳಸಿದಷ್ಟು ಏನಾದರೂ ದೇವರ ಹೆಸರನ್ನು ಬಳಸಿದ್ದರೆ ಇಷ್ಟು ಹೊತ್ತಿಗೆ ಏಳು ಜನ್ಮದವರೆಗೆ ಸ್ವರ್ಗ ಸಿಗುತ್ತಿತ್ತುʼ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯ ಸಭೆಯಲ್ಲಿ ಹೇಳಿದ್ದು, ಅವರ ಈ ಅಸೂಕ್ಷ್ಮವಾದ ಹೇಳಿಕೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಹೇಳಿದ್ದಾರೆ.

ಭಾರತದ ಇತಿಹಾಸದಲ್ಲಿ ಪರಿಶಿಷ್ಟ ಮತ್ತು ಶೋಷಿತ ಸಮುದಾಯಗಳಿಗೆ ಇದ್ದ ಪರಿಸ್ಥಿತಿಯನ್ನು ನೆನಪಿಸಿಕೊಂಡರೆ ವಿಪರೀತ ಅವಮಾನ ದೌರ್ಜನ್ಯಕ್ಕೆ ಒಳಗಾಗಿದ್ದ ಅವರನ್ನು ಯಾವ ದೇವರೂ ಕೂಡಾ ರಕ್ಷಣೆ ಮಾಡಿದ ಉದಾಹರಣೆ ಇಲ್ಲ. ಆದರೆ ಪರಿಶಿಷ್ಟರ, ಮಹಿಳೆಯರ ಮತ್ತು ಶೋಷಿತರ ಬದುಕನ್ನು ತನ್ನ ತ್ಯಾಗ, ಅಧ್ಯಯನ, ಬದ್ಧತೆ ಮತ್ತು ಮಹಾಲೋಕದೃಷ್ಟಿಯ ಮೂಲಕ ಪ್ರತಿದಿನವೂ ರಕ್ಷಣೆ ಮಾಡುತ್ತಿರುವ ನಿಜವಾದ ಶಕ್ತಿ ಯಾವುದಾದರೂ ಇದ್ದರೆ ಅದು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತವರ ಸಂವಿಧಾನ ಎಂಬುದನ್ನು ನಾವುಗಳು ಎದೆ ತಟ್ಟಿಕೊಂಡು ಹೇಳುತ್ತೇವೆ ಎಂದರು

ಭಾರತದಲ್ಲಿ ಅಸ್ಪೃಶ್ಯತೆ ಅನುಭವಿಸಿದ ನಮ್ಮ ಜನರು, ಇಲ್ಲಿನ ಮಹಿಳೆಯರು ಮತ್ತು ಶೋಷಿತ ವರ್ಗಗಳು ಅಂಬೇಡ್ಕರ್ ಅವರನ್ನು ಬಿಟ್ಟು ಅಮಿತ್ ಶಾ ಅವರ ದೇವರ ಹೆಸರನ್ನು ಹೇಳುತ್ತಾ ಕೂತಿದ್ದರೆ ಇಷ್ಟೊತ್ತಿಗೆ ಅವರೆಲ್ಲರೂ ದೇವರ ಪಾದ ಸೇರಬೇಕಾಗಿತ್ತು ಎಂದರು.

ಪಾಸ್ಟರ್ಸ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಚನ್ನಬಸಪ್ಪ ಅಪ್ಪಣ್ಣವರ್, ಟಿಯುಸಿಐ ಮುಖಂಡ ಕೆ.ಬಿ.ಗೋನಾಳ, ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್, ಕೆ ಎಂ ಆರ್ ವಿ ಅಧ್ಯಕ್ಷ ಮುದುಕಪ್ಪ ಎಮ್.ಹೊಸ ಮನಿ, ದಲಿತ ಯುವ ವೇದಿಕೆ ಜಿಲ್ಲಾ ಸಂಚಾಲಕ ಸುಂಕಪ್ಪ ಮಿಸಿ,ಅಹಿಂದ ಜಿಲ್ಲಾ ಸಂಚಾಲಕ ರಮೇಶ್ ಸಾಲ್ಮನಿ, ನಮ್ಮ ಕರ್ನಾಟಕ ಸೇನೆ ಜಿಲ್ಲಾ ಅಧ್ಯಕ್ಷ ಬಂದೆ ನವಾಝ ಮನಿಯಾರ್, ಭೀಮ ಆರ್ಮಿ ಏಕತಾ ಮಿಷನ್ ಜಿಲ್ಲಾ ಕಾರ್ಯದರ್ಶಿ ವೀರೇಶ್ ತೆಗ್ಗಿನಮನಿ, ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಮೌಲಾ ಹುಸೇನ್ ಹಣಗಿ ಮುಂತಾದವರು ಭಾಗವಹಿಸಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News