ಮುಸ್ಲಿಂ ಮೀಸಲಾತಿ ವಿಚಾರದಲ್ಲಿ ಬಿಜೆಪಿಗರು ಹಸಿ ಸುಳ್ಳು ಹೇಳುತ್ತಿದ್ದಾರೆ : ಶಿವರಾಜ್ ತಂಗಡಗಿ
ಕೊಪ್ಪಳ : ಪ್ರಧಾನಿ ನರೇಂದ್ರ ಮೋದಿ ಅವರು ಸೇರಿದಂತೆ ಬಿಜೆಪಿಯವರಿಗೆ ಕನಿಷ್ಠ ಜ್ಞಾನ ಇಲ್ಲ. ಮುಸ್ಲಿಮರ ಮೀಸಲಾತಿ ವಿಚಾರದಲ್ಲಿ ಬಿಜೆಪಿಗರು ಹಸಿ ಸುಳ್ಳು ಹೇಳುತ್ತಿದ್ದು, ಆ ಪಕ್ಷ ಸುಳ್ಳು ಹೇಳುವ ಇನ್ಸ್ಟಿಟ್ಯೂಟ್ ತೆಗೆದಿದೆ ಎಂದು ಸಚಿವ ಶಿವರಾಜ್ ಎಸ್. ತಂಗಡಗಿ ಅವರು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕರೂರು ಮತ್ತು ಸಿರಿಗೇರಿಯಲ್ಲಿ ಶುಕ್ರವಾರ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ್ ಅವರ ಪರ ಮತ ಪ್ರಚಾರ ನಡೆಸಿ ಸಚಿವರು ಮಾತನಾಡಿದರು.
"ಚಿನ್ನಪ್ಪರೆಡ್ಡಿ ಅವರ ಆಯೋಗದ ಶಿಫಾರಸ್ಸಿನಂತೆ ಮುಸ್ಲಿಂರಿಗೆ 20 ವರ್ಷಗಳ ಹಿಂದೆ ಶೇ.4ರಷ್ಟು ಮೀಸಲಾತಿ ನೀಡಲಾಗಿದೆ. ಈ ಮೀಸಲಾತಿಯನ್ನು ತೆಗೆಯಲು ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಹಿಂದಿನ ಸರ್ಕಾರ ಪ್ರಯತ್ನಿಸಿತ್ತು. ಬಳಿಕ ಬಸವರಾಜ ಬೊಮ್ಮಾಯಿ ಅವರ ಸರ್ಕಾರವೇ ಸುಪ್ರೀಂ ಕೋರ್ಟ್ ಗೆ ಮೀಸಲಾತಿ ಮುಂದುವರೆಸುವುದಾಗಿ ಅಫಿಡವಿಟ್ ಸಲ್ಲಿಸಿದೆ. ಈಗಲೂ ಹಿಂದಿನಂತೆ ಮೀಸಲಾತಿ ಮುಂದುವರೆದಿದೆ. ಈ ವಿಚಾರದಲ್ಲಿ ಬಿಜೆಪಿಗರು ಸುಳ್ಳು ಹೇಳುತ್ತಿದ್ದಾರೆ" ಎಂದು ತಿಳಿಸಿದರು.
ದೇಶಕ್ಕೆ ಮೋದಿ ಕೊಡುಗೆ ಏನು?
ಬಿಜೆಪಿಯವರು ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮುನ್ನ ಪೆಟ್ರೋಲ್ ನ್ನು 50 ರೂ.ಗೆ ಕೊಡುತ್ತೇವೆ ಎಂದಿದ್ದರು. ಹತ್ತು ವರ್ಷಗಳ ಹಿಂದೆ 45 ರೂ.ಇದ್ದ ಪೆಟ್ರೋಲ್ ದರ 100 ರೂ.ಗೆ, 450 ರೂ.ಇದ್ದ ಅಡುಗೆ ಅನಿಲ 1100 ರೂ.ಗೆ ತಂದು ನಿಲ್ಲಿಸಿದ್ದಾರೆ. ಬಿಜೆಪಿಯವರು ಅಂಬಾನಿ, ಅದಾನಿ ಅವರನ್ನು ಮಾತ್ರ ಇನ್ನಷ್ಟು ಶ್ರೀಮಂತರನ್ನಾಗಿಸಲು ಮುಂದಾಗಿದ್ದಾರೆ. ಕಾಂಗ್ರೆಸ್ ಇಡೀ ದೇಶದ ಜನರನ್ನು ಶ್ರೀಮಂತರನ್ನಾಗಿಸಲು ಮುಂದಾಗಿದೆ. ಗಡ್ಡ ಬಿಟ್ಟರೆ ವಿಶ್ವ ಗುರು ಆಗಲ್ಲ. ದೇಶದ ರೈತರ, ಬಡವರು, ಮಧ್ಯಮ ವರ್ಗ ಹಾಗೂ ಕಾರ್ಮಿಕರಿಗೆ ಕೊಡುಗೆ ನೀಡಬೇಕು. ನಿಜಕ್ಕೂ ಈ ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಕೊಡುಗೆ ಏನು? ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಸಂಸದ ಕರಡಿ ಸಂಗಣ್ಣ, ಶಾಸಕರಾದ ಬಿ.ಎಂ.ನಾಗರಾಜ್, ಗಣೇಶ್ ಪ್ರಸಾದ್, ಕೊಪ್ಪಳ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ, ಕೊಪ್ಪಳ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ್ ಹಾಗೂ ಸ್ಥಳೀಯ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.