ಡೊಳ್ಳು ಕುಣಿತ ಕಲಾವಿದ ಅನಿಲ್ ಕುಮಾರ್ ನಿಧನ
ಮಂಡ್ಯ: ಅನಾರೋಗ್ಯದಿಂದ ಡೊಳ್ಳು ಕುಣಿತದ ಕಲಾವಿದ ಅನಿಲ್ ಕುಮಾರ್ (37) ಬುಧವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಹಿಂದಿನಿಂದಲೂ ಉಸಿರಾಟದ ತೊಂದರೆ ಅನುಭವಿಸುತ್ತಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಬುಧವಾರ ಮಧ್ಯಾಹ್ನ ಕಾರಸವಾಡಿ ಗ್ರಾಮದಿಂದ ಪತ್ನಿಯ ಊರಾದ ನೊದೆಕೊಪ್ಪಲು ಗ್ರಾಮಕ್ಕೆ ಕಾರಿನಲ್ಲಿ ತೆರೆಳುವಾಗ ಹೃದಯಾಘಾತಕ್ಕೀಡಾಗಿ ಸಾವನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಡೊಳ್ಳು ಕುಣಿತ ಹಾಗೂ ಪೂಜೆ ಕುಣಿತದಲ್ಲಿ ಪರಿಣಿತಿ ಪಡೆದಿದ್ದ ಅನಿಲ್ ಕುಮಾರ್, ರಾಜ್ಯವಷ್ಟೇ ಅಲ್ಲದೇ ವಿದೇಶಗಳಲ್ಲಿಯೂ ಡೊಳ್ಳು ಕುಣಿತ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು.
ಚಿತ್ರ ನಿರ್ದೇಶಕ ಪ್ರೇಮ್ ಇವರಿಗೆ ಅತ್ಯಾಪ್ತರಾಗಿದ್ದರು. ಅನಿಲ್ ಕುಮಾರ್ ಜೋಗಿ ಚಿತ್ರ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಮೂಲತಃ ಬೂದನೂರು ಗ್ರಾಮದವರಾದ ಅನಿಲ್, ಹೆಚ್ಚು ಗುರುತಿಸಿಕೊಂಡಿದ್ದು ಕಾರಸವಾಡಿ ಗ್ರಾಮದಲ್ಲಿಯೇ. ಅವರು ಮದುವೆಯಾದ ನಂತರ ಪತ್ನಿಯ ಊರಾದ ನೊದೆಕೊಪ್ಪಲು ಗ್ರಾಮದಲ್ಲಿ ನೆಲೆಸಿದ್ದರು.
ಅನಿಲ್ ಕುಮಾರ್, ಪತ್ನಿ, ಮಗ ಹಾಗೂ ಕಲಾಭಿಮಾನಿಗಳನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆ ನಾಳೆ (ಜ.2) ನೊದೆಕೊಪ್ಪಲು ಗ್ರಾಮದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.