ಕಾವೇರಿ ನೀರು ಕುಡಿಯಲು ಮಾತ್ರ ಮೀಸಲು: ಸಚಿವ ಚಲುವರಾಯಸ್ವಾಮಿ
ಮಂಡ್ಯ: ಕೃಷ್ಣರಾಜಸಾಗರ ಜಲಾಶಯದಲ್ಲಿ(ಕೆಆರ್ ಎಸ್) ಪ್ರಸ್ತುತ ಸಂಗ್ರಹ ಇರುವ ನೀರನ್ನು ಕುಡಿಯುವುದಕ್ಕೆ ಮೀಸಲಿರಿಸಿದ್ದು, ಬೇಸಿಗೆ ಬೆಳೆಗೆ ನೀರು ಹರಿಸದಿರಲು ತೀರ್ಮಾನಿಸಲಾಗಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದ್ದಾರೆ.
ಕೆಆರ್ ಎಸ್ ಜಲಾಶಯದಲ್ಲಿರುವ ಕಾವೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ನೀರಾವರಿ ಸಲಹಾ ಸಮಿತಿ(ಐಸಿಸಿ) ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರು ದೀರ್ಘಾವಧಿ, ಅಲ್ಪಾವಧಿ ಯಾವುದೇ ಬೆಳೆ ಬೆಳೆಯಬಾರದು ಎಂದು ಮನವಿ ಮಾಡಿದರು.
ಪ್ರಸ್ತುತ ಜಲಾಶಯದಲ್ಲಿ 16 ಟಿಎಂಸಿ ಅಡಿ ನೀರಿದ್ದು, ಇದರಲ್ಲಿ ಬೇಸಿಗೆ ಕಾಲವಾದ್ದರಿಂದ 2-3 ಟಿಎಂಸಿ ಅಡಿ ನೀರು ಆವಿಯಾಗುವ ಸಾಧ್ಯತೆಯಿದೆ. ಕುಡಿಯಲು 13 ಟಿಎಂಸಿ ಅಡಿ ಅಷ್ಟೇ ನೀರು ಲಭ್ಯವಿದೆ. ಜೂನ್‍ವರೆಗೆ ಕುಡಿಯಲು 14 ಟಿಎಂಸಿ ನೀರು ಅಗತ್ಯ ಇದೆ. ಮಳೆ ಬಾರದಿದ್ದರೆ ಕೊನೆಯ ಎರಡು ತಿಂಗಳು ಕುಡಿಯುವ ನೀರಿಗೂ ಸಮಸ್ಯೆ ಆಗಬಹುದು ಎಂದು ಅವರು ವಿವರಿಸಿದರು.
ಮಳೆಯಿಲ್ಲದೆ ಜಲಾಶಯ ತುಂಬಲಿಲ್ಲ. ಈ ನಡುವೆ ಕಾವೇರಿ ನೀರು ನಿಯಂತ್ರಣ ಸಮಿತಿ ಮತ್ತು ನಿರ್ವಹಣಾ ಪ್ರಾಧಿಕಾರದ ಆದೇಶವನ್ನೂ ಪಾಲಿಸಬೇಕಾದ ಪರಿಸ್ಥಿತಿ ಎದುರಾಯಿತು. ಎಲ್ಲಾ ಸವಾಲುಗಳನ್ನು ನಿಭಾಯಿಸಿ ಹಾಲಿ ಇದ್ದ ಬೆಳೆಗೆ ನೀರುಹರಿಸಿ ಬೆಳೆ ಉಳಿಸಿದ್ದೇವೆ ಎಂದು ಅವರು ತಿಳಿಸಿದರು.
ಬಿತ್ತನೆ ಹಾಕಿದ್ದ ರೈತರಿಗೆ ಭತ್ತ ಫಸಲು ಕೈಸೇರಿದೆ. ಈಗಾಗಲೇ ಜಿಲ್ಲೆಯ ಏಳು ತಾಲೂಕುಗಳೂ ಬರಪೀಡಿತ ಪ್ರದೇಶವೆಂದು ಘೋಷಣೆಯಾಗಿದ್ದು, ಕೇಂದ್ರದಿಂದ ಬಿಡುಗಡೆಯಾದ ತಕ್ಷಣ ಎನ್‍ಡಿಆರ್ ಎಫ್ ಮಾರ್ಗಸೂಚಿ ಪ್ರಕಾರ ಪರಿಹಾರ ನೀಡಲಾಗುವುದು. ರೈತರ ಅನುಕೂಲಕ್ಕಾಗಿ ಮುಂಗಡವಾಗಿ 2 ಸಾವಿ ರೂ.ಗಳನ್ನು ರಾಜ್ಯ ಸರಕಾರ ವಿತರಣೆ ಮಾಡಲು ಮುಂದಾಗಿದೆ ಎಂದು ಅವರು ಹೇಳಿದರು.
ಕಾವೇರಿ ಹೋರಾಟಗಾರರಿಗೆ ವಾಸ್ತವ ಪರಿಸ್ಥಿತಿಯನ್ನು ಸಿಎಂ ಕೂಡ ಮನವರಿಕೆ ಮಾಡಿಕೊಟ್ಟಿದ್ದಾರೆ. ಆದರೂ, ಧರಣಿ ಮುಂದುವರಿದಿದೆ. ರಾಜ್ಯ ಸರಕಾರ ಕದ್ದುಮುಚ್ಚಿ ತಮಿಳುನಾಡಿಗೆ ನೀರುಹರಿಸುತ್ತಿದೆ ಎಂಬುದು ಸುಳ್ಳು. ಕಳೆದ ಎರಡೂ ತಿಂಗಳಿಂದ ಜಲಾಶಯದಿಂದ ಒಂದು ಹನಿ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ, ದರ್ಶನ್ ಪುಟ್ಟಣ್ಣಯ್ಯ, ಕೆ.ಎಂ.ಉದಯ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಶೇಕ್ ತನ್ವೀರ್ ಆಸಿಫ್, ಎಸ್ಪಿ ಎನ್.ಯತೀಶ್ ಸೇರಿದಂತೆ ಇತರೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಸಿಎಂ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯ ಶಾಸಕು ಸಭೆಗೆ ಗೈರಾಗಿದ್ದರು.