ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಒಕ್ಕೂಟವನ್ನು ಅಧಿಕಾರದಿಂದ ಕಿತ್ತೊಗೆಯಲು ರೈತಸಂಘ ತೀರ್ಮಾನ : ಬಡಗಲಪುರ ನಾಗೇಂದ್ರ

Update: 2024-03-26 16:45 GMT

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಒಕ್ಕೂಟವನ್ನು ಅಧಿಕಾರದಿಂದ ಕಿತ್ತೊಗೆಯಲು ರೈತಸಂಘ ತೀರ್ಮಾನಿಸಿದ್ದು, ‘ಬಿಜೆಪಿ ಮತ್ತು ಮಿತ್ರ ಪಕ್ಷಗಳ ಸೋಲಿಸಿ ರೈತ ಸಮುದಾಯ ಉಳಿಸಿ’ ಎಂಬ ಘೋಷಣೆಯಡಿ ಪ್ರಚಾರ ನಡೆಸಲಾಗುವುದು ಎಂದು ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 50 ಲಕ್ಷ ಭಿತ್ರಿಪತ್ರಗಳ ಜತೆಗೆ ಮನೆಮನೆಗೆ ತೆರಳಿ ಪ್ರತಿ ಮತದಾರರನ್ನು ಭೇಟಿಯಾಗಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಯನ್ನು ಸೋಲಿಸುವಂತೆ ಅಭಿಯಾನ ನಡೆಸಲಾಗುವುದು ಎಂದರು.

ರೈತ ವಿರೋಧಿ, ಕಾರ್ಮಿಕ ವಿರೋಧಿಯಾದ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರಕಾರವನ್ನು ಕಿತ್ತೊಗೆಯಲು ಕಳೆದ 14ರಂದು ದಿಲ್ಲಿಯ ರಾಮ್‍ಲೀಲಾ ಮೈದಾನದಲ್ಲಿ ನಡೆದ ಬೃಹತ್ ರೈತ-ಕಾರ್ಮಿಕ ಪಂಚಾಯತ್‍ನಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

ನೀಡಿದ ಭರವಸೆಗಳನ್ನು ಈಡೇರಿಸದೆ 10 ವರ್ಷ ಆಡಳಿತ ನಡೆಸಿದ ನರೇಂದ್ರ ಮೋದಿ ಸರಕಾರ, ರೈತರು ಹಾಗೂ ದುಡಿಯುವ ಜನರಿಗೆ ತೀವ್ರ ಅನ್ಯಾಯ ಮಾಡಿದೆ. ಮತ್ತೆ ಮೋದಿ ಅಧಿಕಾರಕ್ಕೆ ಬಂದರೆ ರೈತರು, ಕಾರ್ಮಿಕರು ಸರ್ವನಾಶವಾಗಲಿದ್ದಾರೆ. ಮತ್ತೆ ಚುನಾವಣೆಯೂ ನಡೆಯುವುದಿಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಡಾ.ಸ್ವಾಮಿನಾಥನ್ ವರದಿ ಅನುಷ್ಠಾನಗೊಳಿಸಿ ರೈತರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುತ್ತೇವೆಂದು ಪ್ರಣಾಳಿಕೆಯಲ್ಲಿ ಹೇಳಿದ್ದ ಕೇಂದ್ರದ ಬಿಜೆಪಿ, ಅಧಿಕಾರಕ್ಕೆ ಬಂದ ನಂತರ, ಸ್ವಾಮಿನಾಥನ್ ವರದಿ ಜಾರಿ ಮಾಡುವುದಿಲ್ಲವೆಂದು ನ್ಯಾಯಾಲಯಕ್ಕೆ ಪ್ರಮಾಣ ಸಲ್ಲಿಸಿ ರೈತರಿಗೆ ಅನ್ಯಾಯ ಮಾಡಿದೆ ಎಂದು ಅವರು ಹೇಳಿದರು.

ರೈತ ವಿರೋಧಿ ನೀತಿ ವಿರುದ್ಧ ನಡೆಯುತ್ತಿರುವ ಚಳವಳಿಯಲ್ಲಿ 760 ರೈತರು ಅಸುನೀಗಿದ್ದಾರೆ. ಅಗತ್ಯವಸ್ತುಗಳ ಬೆಲೆ ಏರಿಸಿ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ. ಒಂದೇ ದೇಶ, ಒಂದೇ ಚುನಾವಣೆ, ಕೋಮುವಾದೀ ಧೃವೀಕರಣ ಮುಂತಾದ ಸಂವಿಧಾನ ವಿರೋಧಿ ನೀತಿಗಳಿಗೆ ಒತ್ತು ಕೊಟ್ಟು ವೈವಿಧ್ಯತೆಯಿಂದ ಕೂಡಿದ ಏಕತೆಯ ಉದ್ದೇಶಕ್ಕೆ ಭಂಗತರುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ರಾಜ್ಯ ಖಜಾಂಚಿ ತಗ್ಗಹಳ್ಳಿ ಪ್ರಸನ್ನ, ಮೈಸೂರು ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಮುಖಂಡರಾದ ಕೆನ್ನಾಳು ನಾಗರಾಜು, ಚಂದ್ರಶೇಖರ್, ಶಿವಳ್ಳಿ ಚಂದ್ರು, ಮಲ್ಲೇಶ್, ಸಾಲಿಗ್ರಾಮ ಎಸ್.ಪಿ.ಶೇಖರ್, ರಂಗೇಗೌಡ, ಇತರ ಮುಖಂಡರು ಉಪಸ್ಥಿತರಿದ್ದರು.

“ಎನ್‍ಡಿಎ ಒಕ್ಕೂಟದಲ್ಲಿರುವ ಜೆಡಿಎಸ್ ರೈತರ ಪಕ್ಷವೂ ಅಲ್ಲ, ಜಾತ್ಯತೀತ ಪಕ್ಷವೂ ಅಲ್ಲ. ಬಿಜೆಪಿ ಜಾರಿಗೆ ತಂದ ರೈತರಿಗೆ ಮರಣ ಶಾಸನವಾದ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ಕಾಯ್ದೆಗೆ ಬೆಂಬಲ ನೀಡಿದ ಜೆಡಿಎಸ್ ತನ್ನ ರೈತ ವಿರೋಧಿಯನ್ನು ಬಹಿರಂಗವಾಗಿ ಪ್ರದರ್ಶಿಸಿದೆ. 2023ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ರೈತ, ದಲಿತ, ಕಾರ್ಮಿಕ, ಮಹಿಳಾ, ಪ್ರತಿಪರ ಸಂಘಟನೆಗಳು ಪರಸ್ಪರ ಸಮನ್ವಯತೆಯಿಂದ ಮಾಡಿದ ಸಂಘಟನಾತ್ಮಕ ಪ್ರಯತ್ನದ ಪರಿಣಾಮವೂ ಬಿಜೆಪಿಯನ್ನು ವಿಧಾನಸೌಧದಿಂದ ತೊಲಗಿಸಲು ಕಾರಣವಾಗಿದೆ. ಈ ಲೋಕಸಭಾ ಚುನಾವಣೆಯಲ್ಲಿಯೂ ಈ ಪ್ರಯತ್ನವನ್ನು ಮತ್ತಷ್ಟು ವಿಸ್ತಾರದ ನೆಲೆಯಲ್ಲಿ ಮಾಡಲಾಗುವುದು.”  ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News